

ಚನ್ನರಾಯಪಟ್ಟಣ: ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆಸಿದ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ದೇಶವ್ಯಾಪಿ ನಡೆಸುತ್ತಿರುವ ಸ್ಟಾಪ್ ವೋಟ್ ಚೋರಿ ಅಭಿಯಾನಕ್ಕೆ ಬೆಂಬಲವಾಗಿ ಸಹಿ ಸಂಗ್ರಹ ಅಭಿಯಾನಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ 40 ಅಡಿ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಚಾಲನೆ ನೀಡಿದರು.
ಬಳಿಕ ಮಾತನಾಡಿ, ಮತದಾನ ದೇಶದ ಪ್ರಜೆಗಳ ಹಕ್ಕು. ಆದರೆ ಮತಗಳ್ಳತನದ ಮೂಲಕ ಬಿಜೆಪಿ ಈ ದೇಶದ ಜನತೆಗೆ ಅತಿ ದೊಡ್ಡ ದ್ರೋಹ ಎಸಗಿದೆ. ಇದರ ವಿರುದ್ಧ ನಾವೆಲ್ಲರೂ ಒಂದಾಗಿ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ಬಿಜೆಪಿ ಅಧಿಕಾರಕ್ಕಾಗಿ ಜನರ ಹಕ್ಕನ್ನು ಕಸಿಯುವ ದೇಶದ್ರೋಹದ ಕೆಲಸ ಮಾಡಿದೆ. ಇದರ ವಿರುದ್ಧ ಪ್ರತಿಯೊಬ್ಬ ಪ್ರಜೆಯೂ ಧ್ವನಿ ಎತ್ತಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ 224 ವಿಧಾನಸಭಾ ಕ್ಷೇತ್ರಗಳಲ್ಲೂ ಸಹಿಸಂಗ್ರಹ ಅಭಿಯಾನ ನಡೆಯುತ್ತಿದೆ. ಪಟ್ಟಣದ 23 ವಾರ್ಡ್‌ನಲ್ಲಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದ್ದು ಸುಮಾರು 30 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರ ಸಹಿ ಸಂಗ್ರಹಿಸಿ ಚುನಾವಣಾ ಆಯೋಗಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದರು.
ಜತೆಗೆ ಪಕ್ಷದ ಸದಸ್ಯತ್ವ ಅಭಿಯಾನವನ್ನು ನಡೆಸಲಾಗುವುದು, ನಾವೆಲ್ಲರೂ ಚುನಾವಣಾ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬೇಕು. ಇಲ್ಲದಿದ್ದರೆ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಮತಗಳ್ಳತನದ ವಿರುದ್ಧ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಮತದಾರರು ಈ ಅಕ್ರಮದ ಬಗ್ಗೆ ಎಚ್ಚರವಾಗಬೇಕು. ಮುಂದಿನ ಚುನಾವಣೆಗಳಲ್ಲಿ ಜನತಾ ನ್ಯಾಯಾಲಯವೇ ಈ ಅಕ್ರಮಕ್ಕೆ ಸರಿಯಾದ ಉತ್ತರ ನೀಡಬೇಕು ಎಂದರು.
ಕಾಂಗ್ರೆಸ್ ಮುಖಂಡ ಅಣತಿ ಆನಂದ್, ಸಿಟಿ ಅಶೋಕ್ ಕುಮಾರ್, ರಾಷ್ಟ್ರೀಯ ಅಹಿಂದ ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಜಬಿವುಲ್ಲಾ ಬೇಗ್, ಮಾಜಿ ಪುರಸಭಾ ಸದಸ್ಯರಾದ ಅಂಗಡಿ ಮಂಜಣ್ಣ, ಪರಶುರಾಮ್, ನಾಮಿನಿ ಸದಸ್ಯರಾದ ಬಾಬಣ್ಣ, ಇಮ್ರಾನ್, ರವಿಕುಮಾರ್ ಇತರರು ಇದ್ದರು.