ಕರೊನಾ ಅಪಾಯದ ಮುನ್ಸೂಚನೆ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಿ.ಶಿಖಾ ಸೂಚನೆ

Dist.sec. meeting
??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಚಿಕ್ಕಮಗಳೂರು: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಏರುಗತಿಯಲ್ಲಿರುವ ಕರೊನಾ ಎರಡನೇ ಅಲೆ ಅಪಾಯದ ಮುನ್ಸೂಚನೆ ನೀಡುತ್ತಿದ್ದು, ಜಿಲ್ಲೆಗೆ ಬಾರದಂತೆ ನಿಯಂತ್ರಿಸಲು ಅಗತ್ಯ ಮುಂಜಾಗ್ರತೆ ವಹಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಿ.ಶಿಖಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಪಂ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾದ್ಯಂತ ಕರೊನಾ ಸೋಂಕಿತರು ಮತ್ತು ಅವರ ಸಂಪರ್ಕದ ವ್ಯಕ್ತಿಗಳನ್ನು ಪತ್ತೆಮಾಡಿ ಪರೀಕ್ಷೆಗೆ ಒಳಪಡಿಸುವ ಕಾರ್ಯ ತೀವ್ರವಾಗಬೇಕು. 60 ವರ್ಷ ಮೇಲ್ಪಟ್ಟ ಜಿಲ್ಲೆಯ ನಾಗರಿಕರನ್ನು ಹಾಗೂ 45 ವರ್ಷ ಮೇಲ್ಪಟ್ಟ ವ್ಯಕ್ತಿಗಳನ್ನು ಗುರುತಿಸಿ ಲಸಿಕೆ ಹಾಕಲು ಕ್ರಮ ವಹಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪಾತ್ರ ಬಹಳ ಮುಖ್ಯ ಎಂದು ಹೇಳಿದರು.

ಸರ್ಕಾರದ ಷರತ್ತು ಪಾಲಿಸಬೇಕು:
ಜಿಲ್ಲೆಯಲ್ಲಿ ಬಹುತೇಕ ಜನರು ಮಾಸ್ಕ್ ಧರಿಸದೆ ಓಡಾಡುತ್ತಿದ್ದಾರೆ. ಮಾಸ್ಕ್ ಧರಿಸದಿರುವವರನ್ನು ಗುರುತಿಸಿ ಕಡ್ಡಾಯವಾಗಿ ದಂಡ ವಿಧಿಸಬೇಕು. ಜನರು ಸ್ವಯಂಪ್ರೇರಿತವಾಗಿ ಮಾಸ್ಕ್ ಧರಿಸಿ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಮದುವೆ, ಸಾಮಾಜಿಕ, ಧಾರ್ಮಿಕ ಆಚರಣೆಗಳಿಗೆ ಸರ್ಕಾರ ವಿಧಿಸಿರುವ ಷರತ್ತುಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಕಳೆದ ವರ್ಷ ಈ ದಿನಗಳಲ್ಲಿದ್ದ ಸ್ಥಿತಿಯೇ ನಿರ್ಮಾಣವಾಗುತ್ತಿರುವ ಲಕ್ಷಣ ಕಂಡುಬರುತ್ತಿದೆ. ಜನರಲ್ಲಿ ಕರೊನಾ ಹರಡುವಿಕೆ ವಿರುದ್ಧ ಜಾಗೃತಿ ಮೂಡಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ಇಲಾಖೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.
ಚಿಕ್ಕಮಗಳೂರು ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜ್ ಮಾತನಾಡಿ ಜಿಲ್ಲೆಯಲ್ಲಿ 50 ಗ್ರಾಮಗಳನ್ನು ಪೋಡಿ ಮುಕ್ತ ಗ್ರಾಮಗಳನ್ನಾಗಿ ಮಾಡುವ ಗುರಿ ಹೊಂದಲಾಗಿದೆ. ಈಗಾಗಲೇ 35 ಗ್ರಾಮಗಳನ್ನು ಪೋಡಿ ಮಾಡಿ ಮುಕ್ತಗೊಳಿಸಲಾಗಿದ್ದು, ಇನ್ನೂ 15 ಗ್ರಾಮಗಳು ಬಾಕಿ ಇವೆ ಎಂದರು.

ಕುಡಿವ ನೀರಿನ ಕಾಮಗಾರಿಗೆ ಅನುದಾನ:
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಮೂಡಿಗೆರೆ ತಾಲೂಕು ಕಳಸ ಗ್ರಾಮಕ್ಕೆ ಅನುಮೋದನೆಯಾದ ಸುಮಾರು 2.60 ಕೋಟಿ ರೂ. ವೆಚ್ಚದ ಕಾಮಗಾರಿ ಪೂರ್ಣಗೊಂಡಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇ ವಿನಾಯಕ ಹುಲ್ಲೂರು ಸಭೆಗೆ ಮಾಹಿತಿ ನೀಡಿದರು. ತರೀಕೆರೆ ತಾಲೂಕು ಕರಕುಚ್ಚಿ ಹಾಗೂ ಇತರೆ ಹತ್ತು ಗ್ರಾಮಗಳಿಗೆ 5.14 ಕೋಟಿ, ಹಾಗೂ ಬೇಲೇನಹಳ್ಳಿ ಹಾಗೂ ಇತರ 20 ಗ್ರಾಮಗಳ ಕುಡಿಯುವ ನೀರಿಗೆ 13.02 ಕೋಟಿ ರೂ.ಗೆ ಅನುಮೋದನೆ ದೊರಕಿದೆ ಎಂದರು.

ಪಡಿತರ ವಿತರಣೆಯಲ್ಲಿ ಲೋಪ ಸಲ್ಲ:
ಜಿಲ್ಲೆಯಲ್ಲಿ ಪಡಿತರ ವಿತರಣೆಯಲ್ಲಿ ಯಾವುದೇ ಲೋಪವಾಗದಂತೆ ಕ್ರಮ ವಹಿಸಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳಿಗೆ ಸಿ.ಶಿಖಾ ಸೂಚಿಸಿದರು. ಇದೇ ವೇಳೆ ಮಾಹಿತಿ ನೀಡಿದ ಇಲಾಖೆ ಉಪನಿರ್ದೇಶಕ ಪಿ.ಆರ್.ಕೃಷ್ಣಮೂರ್ತಿ, ಜಿಲ್ಲೆಯಲ್ಲಿ ಒಟ್ಟು 524 ನ್ಯಾಯಬೆಲೆ ಅಂಗಡಿಗಳಿದ್ದು, ಅವುಗಳಲ್ಲಿ 508 ನ್ಯಾಯಬೆಲೆ ಅಂಗಡಿಗಳಲ್ಲಿ ಪಿಒಎಸ್ ಮೂಲಕ ಪಡಿತರ ವಿತರಿಸಲಾಗುತ್ತಿದೆ ಎಂದು ತಿಳಿಸಿದರು. ಶೃಂಗೇರಿ, ಕೊಪ್ಪ, ಚಿಕ್ಕಮಗಳೂರು ಸೇರಿ 16 ನ್ಯಾಯಬೆಲೆ ಅಂಗಡಿಗಳಲ್ಲಿ ಇಂಟರ್‍ನೆಟ್ ಸಮಸ್ಯೆಯಿಂದ ಫಲಾನುಭವಿಗಳ ಸಹಿ ಪಡೆದು ಪಡಿತರ ವಿತರಿಸಲಾಗುತ್ತಿದೆ. ಬಯೋಮೆಟ್ರಿಕ್ ಮೂಲಕವೇ ಪಡಿತರ ವಿತರಿಸುವಂತೆ ಅಧೀನ ಅಧಿಕಾರಿಗಳಿಗೆ ತಿಳಿಸಲಾಗಿದೆ. ಸದ್ಯ ಈ 16 ನ್ಯಾಯಬೆಲೆ ಅಂಗಡಿಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಿದರೆ ಅನುಕೂಲವಾಗುತ್ತದೆ ಎಂದು ಗಮನಕ್ಕೆ ತಂದರು.

ಮಳೆಹಾನಿ ಕಾಮಗಾರಿಗೆ 529.79 ಲಕ್ಷ ವೆಚ್ಚ:
ಜಿಲ್ಲೆಯಲ್ಲಿ 2019-20ರಲ್ಲಿ ಸುರಿದ ಭಾರಿ ಮಳೆಯಿಂದ ಹಾನಿಗೊಳಗಾದ ರಸ್ತೆಗಳು ಮತ್ತು ಸೇತುವೆಗಳ ಮರು ನಿರ್ಮಾಣ ಮತ್ತು ಅಭಿವೃದ್ಧಿಗೆ ಸೇರಿದ ಒಟ್ಟು 492 ಕಾಮಗಾರಿಗಳಿಗೆ 56.85 ಕೋಟಿ ರೂ. ಅನುದಾನ ಹಂಚಿಕೆಯಾಗಿದ್ದು, ಈ ಪೈಕಿ 22.48 ಕೋಟಿ ರೂ. ಬಿಡುಗಡೆಯಾಗಿದೆ. ಈ ಅನುದಾನದಡಿ 253 ಕಾಮಗಾರಿ ಪೂರ್ಣಗೊಳಿಸಿ 529.79 ಲಕ್ಷ ರೂ. ವೆಚ್ಚ ಮಾಡಲಾಗಿದೆ ಎಂದು ಪಿಡಬ್ಲ್ಯುಡಿ ಇಲಾಖೆ ಇಇ ರಾಜೇಶ್ ಮಾಹಿತಿ ನೀಡಿದರು. ಪ್ರಸ್ತುತ ವರ್ಷ 170 ಕಾಮಗಾರಿಗಳು ಪೂರ್ಣಗೊಂಡಿದ್ದು 44 ಕಾಮಗಾರಿಗಳು ಪ್ರಗತಿಯಲ್ಲಿವೆ. 25 ಕಾಮಗಾರಿ ಪ್ರಾರಂಭಿಸಲಾಗಿದೆ. ವಿಭಾಗ ಕಚೇರಿಯಲ್ಲಿ 10.96 ಕೋಟಿ ರೂ. ಬಿಲ್ ಪಾವತಿ ಬಾಕಿ ಇದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮಾತನಾಡಿ, ಜಿಲ್ಲೆಯಲ್ಲಿ 2020ರ ಏ.20ರಿಂದ ಆ.2020ರವರೆಗೆ ಒಟ್ಟು 11 ಮಾನವ ಜೀವ ಹಾನಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಪರಿಹಾರ ವಿತರಿಸಲಾಗಿದೆ ಎಂದು ತಿಳಿಸಿದರು. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿಯಿಂದ ಹೊರತಂದಿರುವ 2019-20ರ ಜಿಲ್ಲೆಯ ಅಂಕಿ-ಅಂಶಗಳ ನೋಟದ ಕೈಪಿಡಿ ಬಿಡುಗಡೆ ಮಾಡಲಾಯಿತು. ಜಿಪಂ ಸಿಇಒ ಎಸ್.ಪೂವಿತಾ, ಎಸ್ಪಿ ಎಂ.ಎಚ್.ಅಕ್ಷಯ್, ಎಡಿಸಿ ಬಿ.ಆರ್.ರೂಪಾ, ತರೀಕೆರೆ ಎಸಿ ರೇಣುಕಾಪ್ರಸಾದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net