ಸಂಕೇತ ಭಾಷೆ ವಿಶ್ವದಲ್ಲಿಯೇ ಶಕ್ತಿಯುತ

1
Published on

ಸಂಕೇತ ಭಾಷೆಯೂ ವಿಶ್ವದಲ್ಲಿಯೇ ಶಕ್ತಿಯುತವಾಗಿದ್ದು, ಇದನ್ನು ಎಲ್ಲರೂ ಅರ್ಥಮಾಡಿಕೊಳ್ಳಬಹುದಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯಿತ್ರಿ ಹೇಳಿದರು.

ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ವತಿಯಿಂದ ಆಯೋಜಿಸಿರುವ ಮೂಲ ಭಾರತೀಯ ಸಂಜ್ಞಾಭಾಷೆ ಕುರಿತ ಮೂರು ದಿನಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ನಾವು ಕೂಡ ಚುನಾವಣಾ ಆಯೋಗದ ಅನುಮತಿ ಪಡೆದು ಸಂಜ್ಞಾ ಭಾಷೆಯಲ್ಲಿ ಕಿವುಡ ಮತ್ತ ಮೂಕ ಮತದಾರರಲ್ಲಿ ಮತ ಜಾಗೃತಿ ಮೂಡಿಸಿದ್ದೆವು. ಗುಡ್ಡಗಾಡು ಪ್ರದೇಶದ ಜನರು ಇಂತಹ ಭಾಷೆಯನ್ನು ಹೆಚ್ಚು ಬಳಸುತ್ತಾರೆ. ಪ್ರಾಣಿ ಮತ್ತು ಪಕ್ಷಿಗಳೂ ಈ ಭಾಷೆಯನ್ನು ಬಳಸುತ್ತವೆ ಎಂದರು.

ನಮ್ಮ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ 250 ಗ್ರಾಪಂಗಳು ಇವೆ. ಇಲ್ಲಿನ ಎಲ್ಲ ಗ್ರಂಥಾಲಯಗಳನ್ನು 2019ರಲ್ಲಿ ಜಿಪಂ ಆಡಳಿತಕ್ಕೆ ವಹಿಸಲಾಗಿದೆ. ಈಗ ಎಲ್ಲ ಲೈಬ್ರರಿಗಳನ್ನು ಡಿಜಿಟಲೀಕರಣ ಮಾಡುತ್ತಿದ್ದು, ಇನ್ಮುಂದೆ ಪುಸ್ತಕ ಓದದವರನ್ನು ಕೂಡ ವಿಡಿಯೋಗಳ ಮೂಲಕ ತಲುಪಲು ಸಾಧ್ಯವಾಗುತ್ತದೆ. ಆಯಿಷ್ ಸಹಕರಿಸಿದರೆ ಇದು ಇನ್ನಷ್ಟು ಸುಲಭವಾಗಲಿದೆ ಎಂದರು.

ಜೆಎಸ್‌ಎಸ್ ಪಿಡಿಎ ಪ್ರಾಂಶುಪಾಲ ಬಿ.ಇಲಂಗೋವನ್ ಮಾತನಾಡಿ, ಸಂವಹನ ಎಂಬುದು ಮುಖ್ಯವಾಗಿದ್ದು, ಭಾಷೆ, ಶಬ್ದ, ಬರವಣಿಗೆ, ಸಂಜ್ಞಾ ಸಹಿತ ಯಾವುದಾದರೂ ಒಂದು ವಿಧದಲ್ಲಿ ಪ್ರತಿಯೊಂದು ಜೀವಿಯೂ ಪರಸ್ಪರ ಸಂವಹನ ನಡೆಸಲೇಬೇಕು. ಪಂಚೇಂದ್ರಿಯಗಳಾದ ಕಣ್ಣು, ಕಿವಿ, ಮೂಗು, ಬಾಯಿ, ಚರ್ಮಗಳ ಮೂಲಕ ಯಾವುದೇ ವಿಷಯವನ್ನು ಮಿದುಳು ತಲುಪುತ್ತದೆ. ಮಿದುಳು ನಿಯಂತ್ರಿಸುತ್ತದೆ. ಈ ಪಂಚೇಂದ್ರಿಯಗಳ ದೋಷವುಳ್ಳ ಅಂಧರಿಗೆ ಬ್ರೈಲ್ ಲಿಪಿಯ ಮೂಲಕ ಮತ್ತು ಕಿವುಡ ಮತ್ತ ಮೂಕ ಮಕ್ಕಳಿಗೆ ಸಂಜ್ಞಾ ಮೂಲಕ ವಿಷಯವನ್ನು ತಿಳಿಸಬೇಕಾಗುತ್ತದೆ ಎಂದರು.

ಇಂಗ್ಲಿಷ್‌ಗೆ ಸಾಕಷ್ಟು ಪ್ರಾಮುಖ್ಯತೆಯಿದ್ದು, ಇದನ್ನು ಕಿವುಡ ಮತ್ತ ಮೂಕ ಮಕ್ಕಳಿಗೆ ಆರಂಭದಿಂದಲೇ ಹೇಳಿಕೊಡುವುದು ಸೂಕ್ತ ಎಂದ ಅವರು, ಭಾರತದಲ್ಲಿ ಈ ರೀತಿ ವಿಶೇಷ ಮಕ್ಕಳು ಸುಮಾರು 7 ಮಿಲಿಯನ್ ಇದ್ದಾರೆ. ಆದರೆ ಇವರಿಗೆ ಮಾರ್ಗದರ್ಶನ ಮಾಡುವ ಸರ್ಟಿಫೈಡ್ ಬೋಧಕರು ಕೇವಲ 250 ರಿಂದ 300 ಮಂದಿ ಮಾತ್ರವಿದ್ದಾರೆ. ಈ ಕೊರತೆಯನ್ನು ನೀಗಿಸುವ ಕೆಲಸವಾಗಬೇಕು. ಸಂಜ್ಞಾ ಭಾಷೆ ಕಲಿಯಲು ಸುಲಭವಾಗಿದ್ದು, ಅನೇಕರು ಇದನ್ನು ಕಲಿತು ಮಾರ್ಗದರ್ಶಕರಾಗಬೇಕು ಎಂದು ಸಲಹೆ ನೀಡಿದರು.


ಆಯಿಷ್ ನಿರ್ದೇಶಕಿ ಪ್ರೊ.ಪುಷ್ಪಾವತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net