ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಸಿಗ್ಮಾ ಆಸ್ಪತ್ರೆ ಕೊಡುಗೆ ಅಪಾರ

7
Published on

ಮೈಸೂರು: ಆರೋಗ್ಯವಂತ ಸಮಾಜ ನಿರ್ಮಾಣ ಕಾರ್ಯದಲ್ಲಿ ಸಿಗ್ಮಾ ಆಸ್ಪತ್ರೆ ಮತ್ತು ಸಿಗ್ಮಾ ನರ್ಸಿಂಗ್ ಕಾಲೇಜಿನ ಕೊಡುಗೆ ಅಪಾರ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಹೇಳಿದರು.

ಸಿಗ್ಮಾ ನರ್ಸಿಂಗ್ ಕಾಲೇಜು ಮತ್ತು ಅಲೈಡ್ ಹೆಲ್ತ್ ಸೈನ್ಸ್ ವತಿಯಿಂದ ಕಲಾಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಪ್ರಮಾಣ ಸ್ವೀಕಾರ ಮತ್ತು ಪದವಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಸಿಗ್ಮಾ ಆಸ್ಪತ್ರೆ ಮತ್ತು ಸಿಗ್ಮಾ ನರ್ಸಿಂಗ್ ಕಾಲೇಜು ನಿರಂತರವಾಗಿ ಆರೋಗ್ಯ ಸಮಾಜ ನಿರ್ಮಾಣ ಕಾರ್ಯದಲ್ಲಿ ಸಾಗಿದೆ. ಸಮಾಜಕ್ಕೆ ಉತ್ತಮ ಶುಶ್ರೂಷಕರನ್ನು ನೀಡುತ್ತಿದೆ. ಇಂತಹ ಕಾರ್ಯಕ್ರಮದಲ್ಲಿ ಭಾಗಿಯಾಗಲು ನನಗೆ ಖುಷಿಯಾಗಿದೆ. ಇಂದು ನರ್ಸಿಂಗ್ ಪದವಿ ಪಡೆಯುತ್ತಿರುವ ಎಲ್ಲರಿಗೂ ಉತ್ತಮ ಅವಕಾಶ ಸಿಗಲಿ ಎಂದು ಹಾರೈಸಿದರು.

ಶುಶ್ರೂಷಕರು ಆರೋಗ್ಯ ಸೇವಾ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಆರೋಗ್ಯವಲಯದಲ್ಲಿ ವೈದ್ಯರಷ್ಟೇ ಮಹತ್ತರವಾದ ಜವಾಬ್ದಾರಿಯನ್ನು ನಿರ್ವಹಿಸುವವರು ಶುಶ್ರೂಷಕರು. ವೈದ್ಯರು ರೋಗಿಯ ತಪಾಸಣೆ ಮಾಡಿ, ಚಿಕಿತ್ಸೆಯನ್ನು ಸೂಚಿಸಿ ಮುಂದಿನ ಕೆಲಸಕ್ಕೆ ತೆರಳಿಬಿಡುತ್ತಾರೆ. ಆದರೆ, ಆ ಚಿಕಿತ್ಸಾ ಪ್ರಕ್ರಿಯೆಯನ್ನು ಶುಶ್ರೂಷಕರು ಮಾಡುತ್ತಾರೆ. ಇಂದು ಪದವಿ ಪಡೆದ ಎಲ್ಲರೂ ಶ್ರದ್ಧೆ, ಬದ್ಧತೆಯಿಂದ ಕೆಲಸ ಮಾಡುವ ಮೂಲಕ ರೋಗಿಗಳಿಗೆ ನೆರವಾಗಿ. ನೀವು ಕೆಲಸ ಮಾಡುವ ಸ್ಥಳದಲ್ಲೂ ವೃತ್ತಿ ಸಂಬಂಧ ನಿರಂತರವಾಗಿ ಹೊಸ ಹೊಸ ವಿಚಾರಗಳನ್ನು ಕಲಿಯಿರಿ ಎಂದು ಸಲಹೆ ನೀಡಿದರು.

ವೃತ್ತಿ ನೈಪುಣ್ಯತೆಗೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಬಳಕೆ ಅಗತ್ಯವಿದೆ. ಎಐನಿಂದ ಉದ್ಯೋಗ ನಷ್ಟವಾಗುತ್ತದೆ ಎಂದು ಅನೇಕು ಹೇಳುತ್ತಾರೆ. ಅದು ತಾತ್ಕಾಲಿಕ, ಕೃತಕ ಬುದ್ಧಿಮತ್ತೆಯಿಂದ ಹೊಸ ಉದ್ಯೋಗ ವಲಯ ಸೃಷ್ಟಿಯಾಗುತ್ತವೆ. ಕೃತಕ ಬುದ್ಧಿಮತ್ತೆ ಕ್ಷೇತ್ರವು ವಿಸ್ತರಿಸುತ್ತಿದ್ದು, ಇದನ್ನು ಎಲ್ಲ ವೃತ್ತಿಗಳಲ್ಲಿ ಬಳಸಬಹುದು ಎಂದರು.

ಇದೇ ವೇಳೆ 30 ನರ್ಸಿಂಗ್ ಹಾಗೂ 36 ಅಲೈಡ್ ಸೈನ್ಸಸ್‌ನ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಸುಯೋಗ ನರ್ಸಿಂಗ್ ಕಾಲೇಜು ಪ್ರಾಂಶುಪಾಲರಾದ ಪ್ರೊ.ಟಿ.ನಾಗಮಣಿ, ಸಿಗ್ಮಾ ನರ್ಸಿಂಗ್ ಕಾಲೇಜು ಮತ್ತು ಅಲೈಡ್ ಹೆಲ್ತ್ ಸೈನ್ಸ್ ಪ್ರಾಂಶುಪಾಲ ಪ್ರೊ.ಮಂಜುನಾಥ್, ಟ್ರಸ್ಟಿ ಡಾ.ಕೆ.ಎಂ.ಮಾದಪ್ಪ, ವರ್ಗೀಸ್ ಕೆ.ಅಬ್ರಹಾಂ, ಜ್ಞಾನ ಶಂಕರ್, ಡಾ.ರಾಜೇಶ್ವರಿ, ಶೈಲಾ ಶಂಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net