ಸಿಗಂದೂರು ಸೇತುವೆ ಉದ್ಘಾಟನೆ 14ಕ್ಕೆ

bridge
ಉದ್ಘಾಟನೆಗೆ ಸಜ್ಜಾಗಿರುವ ಸಿಗಂದೂರು ಸೇತುವೆ.
Published on

ಶಿವಮೊಗ್ಗ: ಬಹು ನಿರೀಕ್ಷಿತ ಸಿಗಂದೂರು ಸೇತುವೆಯ ಉದ್ಘಾಟನೆಗೆ ದಿನಾಂಕ ನಿಗದಿಯಾಗಿದೆ. ಜು.14ರಂದು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ದೇಶದ ಎರಡನೇ ಅತಿ ದೊಡ್ಡ ಕೇಬಲ್ ಸೇತುವೆಯನ್ನು ಲೋಕಾರ್ಪಣೆಗೊಳಿಸುವರು. 2018ರಲ್ಲಿ ಈ ಸೇತುವೆಗೆ ಗಡ್ಕರಿ ಶಂಕುಸ್ಥಾಪನೆ ನೆರವೇರಿಸಿದ್ದರು. ಈಗ ಅವರೇ ಉದ್ಘಾಟನೆ ಮಾಡುತ್ತಿರುವುದು ವಿಶೇಷ.

ಐತಿಹಾಸಿಕ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉಪಸ್ಥಿತರಿರುವರು. ಇವರೊಂದಿಗೆ ಶಿಷ್ಟಾಚಾರದಂತೆ ಸಚಿವರು, ಶಾಸಕರು, ಜನಪ್ರತಿನಿಧಿಗಳು ಪಾಲ್ಗೊಳ್ಳುವರು. ಕಾರ್ಯಕ್ರಮದ ಸಮಯ ಇನ್ನಷ್ಟೇ ನಿಗದಿಯಾಗಬೇಕಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೇತುವೆಯನ್ನು ಶೀಘ್ರವಾಗಿ ಜನರ ಸೇವೆಗೆ ಒದಗಿಸಬೇಕೆಂಬ ಉದ್ದೇಶದಿಂದ ಕಾಮಗಾರಿ ತ್ವರಿತಗೊಳಿಸಲು ಸೂಚಿಸಲಾಗಿದೆ. ಎರಡನೇ ಹಂತದ ರೋಡ್ ಟೆಸ್ಟಿಂಗ್ ನಡೆಯುತ್ತಿದೆ. ಸಣ್ಣಪುಟ್ಟ ಕಾಮಗಾರಿಗಳು ಬಾಕಿ ಉಳಿದಿವೆ. ಅವುಗಳೆಲ್ಲ ವಾರದೊಳಗೆ ಪೂರ್ಣಗೊಳ್ಳಲಿವೆ ಎಂದು ಹೇಳಿದರು.

ರಾಮಪ್ಪ ಹಾಗೂ ಶೇಷಗಿರಿ ಭಟ್ ಅವರ ಪರಿಶ್ರಮದಿಂದ ಸಿಗಂದೂರು ಚೌಡೇಶ್ವರಿ ದೇವಸ್ಥಾನ ನಾಡಿನ ಪ್ರಮುಖ ಶಕ್ತಿಕೇಂದ್ರವಾಗಿ ಮಾರ್ಪಟ್ಟಿದೆ. ಸಹಸ್ರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ನೂತನ ಸೇತುವೆಗೆ ಸಿಗಂದೂರು ಚೌಡೇಶ್ವರಿ ಹೆಸರು ನಾಮಕರಣ ಮಾಡಬೇಕು. ಈ ಸಂಬಂಧ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ಕೇಂದ್ರ ಸರ್ಕಾರದಿಂದ ಅನುಮತಿ ಕೊಡಿಸಲಾಗುವುದು ಎಂದು ಬಿ.ವೈ.ರಾಘವೇಂದ್ರ ತಿಳಿಸಿದರು.

ಶಾಸಕರಾದ ಆರಗ ಜ್ಞಾನೇಂದ್ರ, ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಮಾಜಿ ಶಾಸಕರಾದ ಹರತಾಳು ಹಾಲಪ್ಪ, ಕೆ.ಬಿ.ಅಶೋಕ್ ನಾಯ್ಕ, ಕೆ.ಜಿ.ಕುಮಾರಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಮಾಜಿ ಅಧ್ಯಕ್ಷ ಟಿ.ಡಿ.ಮೇಘರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ.ಹರಿಕೃಷ್ಣ, ಪ್ರಕೋಷ್ಠಗಳ ರಾಜ್ಯ ಸಂಚಾಲಕ ಎಸ್.ದತ್ತಾತ್ರಿ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net