

ಕಳಸ: ಕಳಸ ತಾಲೂಕಿನ ಇಡಕಿಣಿ ಗ್ರಾಪಂ ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಹಾಗೂ 94ಸಿ ಅಡಿ ಹಕ್ಕುಪತ್ರ ನೀಡುವಲ್ಲಿನ ವಿಳಂಬ ಖಂಡಿಸಿ ಕಮ್ಯೂನಿಷ್ಟ್ ಪಕ್ಷದ ಕಾರ್ಯಕರ್ತರು ಇಡಕಣಿ ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಸಿಪಿಐ ಮುಖಂಡ ಲಕ್ಷ್ಮಣಾಚಾರ್ ಮಾತನಾಡಿ, ಇಡಕಿಣಿ ಗ್ರಾಪಂ ವ್ಯಾಪ್ತಿಯಲ್ಲಿ ಈಗಾಗಲೇ ಹಲವಾರು ನಿವೇಶನ ರಹಿತರ ಪಟ್ಟಿ ಇದೆ. ಕೆಲವು ನಿವೇಶನ ರಹಿತರು ಪಟ್ಟಿಯಿಂದ ಹೊರಗೂ ಇದ್ದಾರೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ನಿವೇಶನ ರಹಿತರನ್ನು ಗುರುತಿಸಲು ಮತ್ತು 94ಸಿ ಅಡಿ ಹಕ್ಕುಪತ್ರ ನೀಡದ ಕುಟುಂಬಗಳನ್ನು ಗುರುತಿಸಿ ತುರ್ತು ಹಕ್ಕುಪತ್ರ ನೀಡಲು ಕ್ರಮಕೈಗೊಳ್ಳಬೇಕು. ನಿವೇಶನ ಹಾಗೂ 94ಸಿ ಅಡಿ ಹಕ್ಕುಪತ್ರ ಆಕಾಂಕ್ಷಿಗಳಲ್ಲಿ ಹೆಚ್ಚಿನವರು ಎಸ್ಸಿ, ಎಸ್ಟಿ ಪಂಗಡದವರಾಗಿರುತ್ತಾರೆ ಎಂದರು.
ಹಿಂದಿನ ಜನಪ್ರತಿನಿಧಿಗಳ ನಿರಾಸಕ್ತಿಯಿಂದ ನಿವೇಶನ ರಹಿತರಿಗೆ ತೊಂದರೆಯಾಗಿರುತ್ತದೆ. ಇಡಕಿಣಿ ಗ್ರಾಮ ವ್ಯಾಪ್ತಿಯಲ್ಲಿ ಈ ಹಿಂದೆ ಗುರುತು ಪಡಿಸಿರುವ ಜಾಗಗಳಲ್ಲಿ ಈಗಿರುವ ನಿವೇಶನ ರಹಿತರ ಲಾನುಭವಿಗಳ ಪಟ್ಟಿಗಳಲ್ಲಿ ಮತ್ತು ಹೊಸದಾಗಿ ಪಟ್ಟಿಗೆ ಸೇರ್ಪಡಿಸುವ ಲಾನುಭವಿಗಳನ್ನು ಗುರುತು ಮಾಡಿ, ಪಟ್ಟಿ ತಯಾರಿಸಿ, ತುರ್ತು ಹಕ್ಕುಪತ್ರ ನೀಡಲು ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ನಿವೇಶನಕ್ಕಾಗಿ ಕಳೆದ 20 ವರ್ಷಗಳಿಂದ ನಿರಂತರ ಹೋರಾಟಮಾಡಲಾಗುತ್ತಿದೆ. ಈ ಭಾಗದ ಜನಪ್ರತಿನಿಧಿ ಹಾಗೂ ಆಶ್ರಯ ಸಮಿತಿ ಅಧ್ಯಕ್ಷರಾಗಿರುವುದರಿಂದ ಇಡಕಣಿ ಗ್ರಾಪಂ ಎದುರು ಪ್ರತಿಭಟನೆ ನಡೆಸಿ ಗ್ರಾಪಂ ಪಿಡಿಒಗೆ ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ತುರ್ತು ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಕ್ತ ಆದೇಶ ನೀಡಬೇಕು ಹಾಗೂ 94ಸಿ ಅಡಿಯಲ್ಲಿ ಲಾನುಭವಿಗಳಿಗೆ ಕಡತ ತಯಾರಿಸಿ, ಹಕ್ಕುಪತ್ರ ವಿತರಿಸಬೇಕು ಎಂದು ಒತ್ತಾಯಿಸಿದರು.
ಪಕ್ಷದ ಮುಖಂಡರಾದ ಗೋಪಾಲ ಶೆಟ್ಟಿ, ರಮೇಶ್ ಕೆಳಗೂರು, ಬಿ.ಆರ್ ಮಂಜುನಾಥ್, ಮೋಹನ್ ಇತರರು ಇದ್ದರು.