

ದೊಡ್ಡಬಳ್ಳಾಪುರ: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರೈತ ಸಂಘದಿಂದ ಡಿ.13ರಂದು ಬೆಳಗಾವಿಯ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಿದ್ದೇವೆ ಎಂದು ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಳಿಗಾಲದ ಅಧಿವೇಶನದಲ್ಲಿ ರೈತರ ಸಮಸ್ಯೆಗಳ ಕುರಿತು ಚರ್ಚಿಸದ ರಾಜ್ಯ ಸರ್ಕಾರದ ವಿರುದ್ಧ ಡಿ.13ರಂದು ರಾಜ್ಯದ ಹಲವು ಭಾಗದ ರೈತರು ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು. ವಕ್ಫ್ ಬೋರ್ಡ್, ಬಗರ್ ಹುಕುಂ, ಸರ್ಕಾರಿ ದಾಖಲಾತಿಗಳನ್ನು ಪಡೆಯುವಲ್ಲಿ ರೈತರ ಸಮಸ್ಯೆ ಸೇರಿ ಹತ್ತು ಹಲವು ಸಮಸ್ಯೆಗಳನ್ನು ರಾಜ್ಯ ಸರ್ಕಾರಕ್ಕೆ ತಿಳಿಸುವ ನಿಟ್ಟಿನಲ್ಲಿ ಪ್ರತಿಭಟನೆಗೆ ಮುಂದಾಗಿದ್ದು, ಪ್ರತಿಭಟನೆಯಲ್ಲಿ ರಾಜ್ಯದ ಪ್ರತಿ ಜಿಲ್ಲೆ ಹಾಗೂ ತಾಲೂಕುಗಳಿಂದ ರೈತರು ಪಾಲ್ಗೊಳ್ಳುತ್ತಿದ್ದಾರೆ ಎಂದರು.
ತಾಲ್ಲೂಕು ಅಧ್ಯಕ್ಷ ಹನುಮೇಗೌಡ ಮಾತನಾಡಿ, ಈ ಹಿಂದೆ 15 ತಿಂಗಳ ರೈತರ ನಿರಂತರ ಹೋರಾಟಕ್ಕೆ ಕೇಂದ್ರ ಸರ್ಕಾರ ಮಣಿದು ಕೃಷಿ ವಿರೋಧಿ ಕಾಯ್ದೆಗಳನ್ನು ಹಿಂಪಡೆದಿದೆ. ಆದರೆ, ರಾಜ್ಯ ಸರ್ಕಾರ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ, ಕಾಯ್ದೆ ಹಿಂಪಡೆದಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಭೂ ಸುಧಾರಣೆ ಕಾಯ್ದೆಯನ್ನು ಹಿಂಪಡೆಯುತ್ತೇವೆ ಎಂದು ಭರವಸೆ ನೀಡಿದ ರಾಜ್ಯ ಸರ್ಕಾರ ಮರೆತಿದೆ. ಹಾಗಾಗಿ ಬೆಳಗಾವಿಯಲ್ಲಿ ಹೋರಾಟ ನಡೆಯಲಿದೆ. ಅಭಿವೃದ್ಧಿ ಹೆಸರಿನಲ್ಲಿ ಫಲವತ್ತಾದ ನೂರಾರು ಎಕರೆ ಭೂ ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ, ರೈತರ ಬೆಂಬಲವಾಗಿ ನಿಲ್ಲಬೇಕಿದ್ದ ಸರ್ಕಾರ ರೈತರ ಜೀವನಕ್ಕೆ ಮುಳುವಾಗುತ್ತಿರುವುದು ಸರಿಯಲ್ಲ ಎಂದರು.