

ನೆಲಮಂಗಲ: ಗ್ರಾಮಪಂಚಾಯಿತಿಗಳಲ್ಲಿ ಅವ್ಯವಹಾರ ಮಟ್ಟಹಾಕುವಂತೆ ಒತ್ತಾಯಿಸಿ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು, ಕಾರ್ಯಕರ್ತರು ತಾಲೂಕು ಪಂಚಾಯಿತಿ ಮುಂಭಾಗ ಸೋಮವಾರ ಧರಣಿ ನಡೆಸಿದರು.
ನಗರದ ಪ್ರವಾಸಿ ಮಂದಿರ ಬಳಿ ಸಮಾವೇಶಗೊಂಡ ನೂರಾರು ಮುಖಂಡರು ಹಾಗೂ ಕಾರ್ಯಕರ್ತರು ಭ್ರಷ್ಟ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ತಾಲೂಕು ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕುಲು ಮುಂದಾದಾಗ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದರು. ಆದರೆ ಬ್ಯಾರಿಕೇಡ್‌ಗಳನ್ನು ತಳ್ಳಿ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ಕುಳಿತರು.
ಬಳಿಕ ವಿಶೇಷ ತಹಸೀಲ್ದಾರ್ ಭಾಗ್ಯಾ ಅವರಿಗೆ ಮನವಿ ಸಲ್ಲಿಸಿದರು. ಮಾಜಿ ಶಾಸಕ ಎಂ.ವಿ.ನಾಗರಾಜು, ನೆ.ಯೋ.ಪ್ರಾಧಿಕಾರ ಮಾಜಿ ಅಧ್ಯಕ್ಷ ಎಸ್.ಮಲ್ಲಯ್ಯ, ಜೆಡಿಎಸ್ ತಾಲೂಕು ಕಾರ್ಯಾಧ್ಯಕ್ಷ ಬೂದಿಹಾಲ್‌ರಾವ್, ಪ್ರಧಾನ ಕಾರ್ಯದರ್ಶಿ ಸುರೇಶ್, ಕಸಬಾ ಅದ್ಯಕ್ಷ ರಮೇಶ್, ನಗರಸಭೆ ಸದಸ್ಯ ಸುನೀಲ್‌ಮೂಡ್, ಅಂಜನಮೂರ್ತಿ, ಶಿವಕುಮಾರ್, ಅಂಜಿನಪ್ಪ, ಹೆಚ್ಚುವರಿ ಸದಸ್ಯ ಕೃಪಾನಂದ್, ಬಿಜೆಪಿಮಹಿಳಾ ಘಟಕ ಅಧ್ಯಕ್ಷೆ ಮಂಜುಳಾಸುರೇಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರುದ್ರೇಶ್, ಮುಖಂಡ ಎಚ್.ಡಿ.ಹರ್ಷ, ಮೋಹನ್‌ಕುಮಾರ್ ಅಶ್ವತ್ಥ, ಡಿ.ಸಿದ್ದರಾಜು, ಕೆಂಪರಾಮಯ್ಯ, ಮುರಳೀಧರ್, ಹನುಮಂತರಾಜು, ಮಂಜುನಾಥ್, ಶಿವಕುಮಾರ್, ರಾಜಮ್ಮ, ವೇದಾವತಿ ಉಪಸ್ಥಿತರಿದ್ದರು.
ಶಾಸಕರ ಹಿಡಿತದಲ್ಲಿಲ್ಲ ಗ್ರಾಪಂಗಳು: ತಾಲೂಕಿನ ಬಹುತೇಕ ಗ್ರಾಮ ಪಂಚಾಯಿತಿ ಆಡಳಿತ ಶಾಸಕರ ಹಿಡಿತದಲ್ಲಿಲ್ಲ. ಆದ್ದರಿಂದ ಪಂಚಾಯಿತಿಗಳಿಗೆ ಅವರಿಗೆ ಬೇಕಾದ ಪಿಡಿಒಗಳನ್ನು ನಿಯೋಜನೆ ಮಾಡಿಕೊಂಡು ಜನರ ಮೇಲೆ ಹಾಗೂ ಬಿಜೆಪಿ-ಜೆಡಿಎಸ್ ಬೆಂಬಲಿತ ಸದಸ್ಯರಿಗೆ ತೊಂದರೆಯುಂಟು ಮಾಡುತ್ತಾರೆ. ತಾಲೂಕು ಮಟ್ಟ ಅಧಿಕಾರಿಗಳು ಹಾಗೂ ಪಿಡಿಒಗಳು ಶಾಸಕರ ಅಧೀನದಲ್ಲಿದ್ದಂತೆ ಕಾಣುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನಾತ್ಮಕವಾಗಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕಾಗಿದೆ. ರಾಜಕೀಯ ವ್ಯಕ್ತಿಯೊಬ್ಬರ ಕೈಗೊಂಬೆಯಾಗಿ ಅಲ್ಲ. ಶಾಸಕರು ರಸ್ತೆ, ಚರಂಡಿ, ಶಾಲೆ ಸೇರಿ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಲಿ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಇ.ಕೃಷ್ಣಪ್ಪ ಆಗ್ರಹಿಸಿದರು.
ಶಾಸಕರಿಂದ ಅವಮಾನ
ಶಾಸಕರು ಭ್ರಷ್ಟ ಅಧಿಕಾರಿಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ತಮ್ಮ ಬೆಂಬಲಿತರ ಪರವಾಗಿ ನಡೆದುಕೊಳ್ಳುವಂತೆ ಅಧಿಕಾರಿಗಳಿಗೆ ಒತ್ತಡ ಹಾಕುತ್ತಿದ್ದಾರೆ. ಮಾತು ಕೇಳದ ಅಧಿಕಾರಿಗಳನ್ನ ಅಮಾನತು ಹಾಗೂ ವರ್ಗಾವಣೆ ಮಾಡಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿಯಲ್ಲಿರುವ ಮೈತ್ರಿ ಪಕ್ಷಗಳ ಬೆಂಬಲಿತ ಸದಸ್ಯರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್‌ಚೌಧರಿ ಅರೋಪಿಸಿದರು.
ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ
ಶಾಸಕ ಎನ್.ಶ್ರೀನಿವಾಸ್ ಗುತ್ತಿಗೆದಾರನಾಗಿ ಯಾವ ರೀತಿ ಹಣ ಸಂಪಾದನೆ ಮಾಡಿದ್ದಾರೆಂದು ಕ್ಷೇತ್ರದ ಜನರಿಗೆ ತಿಳಿದೆ. ನನ್ನ ಮೇಲೆ ಒಂದೇ ಒಂದು ಭ್ರಷ್ಟಾಚಾರ ಆರೋಪವನ್ನು ಸಾಬೀತು ಪಡಿಸಿದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್‌ಚೌಧರಿ ಶಾಸಕರಿಗೆ ಸವಾಲು ಹಾಕಿದರು.