ಹಿರೇಹಾಳ ಕೃಷಿ ಪತ್ತಿನ ಸಹಕಾರಿ ಕಚೇರಿಗೆ ಮುತ್ತಿಗೆ

Hirehal
Published on

ರೋಣ: ತಾಲೂಕಿನ ಹಿರೇಹಾಳ ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಸಂಘದ ಸದಸ್ಯರು ಕೃಷಿ ಪತ್ತಿನ ಸಹಕಾರಿ ಕಚೇರಿಗೆ ಗುರುವಾರ ಮುತ್ತಿಗೆ ಹಾಕಿದರು.

ಸಹಕಾರಿ ಸಂಘದ ಮೂಲಕ ಹಲವು ರೈತರು ಕೃಷಿ ಉದ್ದೇಶಕ್ಕಾಗಿ ಬೆಳೆಸಾಲ ಪಡೆದುಕೊಂಡಿದ್ದಾರೆ. ಈ ಹಿಂದಿನ ಸರ್ಕಾರಗಳು ಬೆಳೆ ಸಾಲ ಮನ್ನಾ ಮಾಡಿದ್ದರೂ ಸಂಘದ ಕಾರ್ಯದರ್ಶಿ ಕೈಚಳಕದಿಂದ ಇದರ ಲಾಭ ರೈತರಿಗೆ ದೊರೆಯದಂತಾಗಿದೆ. ಕಾರ್ಯದರ್ಶಿ ಸೇರಿದಂತೆ ಸಹಕಾರ ಇಲಾಖೆಯ ಪ್ರಮುಖ ಅಧಿಕಾರಿಗಳು ಅವ್ಯವಹಾರ ನಡೆಸಿದ್ದಾರೆ ಎಂದು ಸಂಘದ ಸದಸ್ಯರು ಆರೋಪಿಸಿದರು.

ಸಂಘದ ಷೇರುದಾರರ ನಕಲಿ ಸಹಿ ಮಾಡಿ ಸಾಲ ಮಂಜೂರಾತಿ ಮಾಡಿಕೊಂಡಿದ್ದು, ಸಾಲದ ಮೊತ್ತವನ್ನು ರೈತರ ಖಾತೆಗೆ ಜಮೆ ಮಾಡದೆ ಲಪಟಾಯಿಸಿದ್ದಾರೆ. ಕಾರ್ಯದರ್ಶಿ ಶಂಕರಗೌಡ ಗೌಡರ ಅವರು ಲೆಕ್ಕಪತ್ರದ ಪುಸ್ತಕಗಳನ್ನು ಸಂಘದ ಕಚೇರಿಯಲ್ಲಿ ಇಡದೆ ಮನೆಗೆ ಒಯ್ಯುವುದೇಕೆ ಎಂದು ಪ್ರಶ್ನಿಸಿದ ರೈತರು, ಕಳೆದ 20 ವರ್ಷಗಳಿಂದ ಈ ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತಪಡಿಸಿದರು.

ಬೆಳೆ ಸಾಲ ಅಲ್ಲದೆ, ಜಾನುವಾರುಗಳನ್ನು ಕೊಳ್ಳಲು ಸಹಾಯಧನದ ಅಡಿ ನೀಡುತ್ತಿರುವ ಸಾಲಗಳಲ್ಲಿಯೂ ಅವ್ಯವಹಾರ ನಡೆದಿರುವ ಸಾಧ್ಯತೆ ಇದೆ. ಗ್ರಾಮದ ಸರಹದ್ದಿನಲ್ಲಿ ಯಾವುದೇ ಜಮೀನು ಹೊಂದಿರದ, ಸಂಘದ ಸದಸ್ಯತ್ವವನ್ನು ಪಡೆಯದ ರೈತರ ಹೆಸರಿನಲ್ಲಿ ಸಾಲ ಮಂಜೂರಾತಿ ಮಾಡಿರುವ ಹಿಂದಿರುವ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿದರು.

ಸಂಘದ ಒಡೆತನದಲ್ಲಿ ನ್ಯಾಯಬೆಲೆ ಅಂಗಡಿ ಕೂಡ ಇದ್ದು ಸರಿಯಾಗಿ ಪಡಿತರ ವಿತರಿಸದೇ ಗ್ರಾಮದ ಬಡವರಿಗೆ ಅನ್ಯಾಯ ಎಸಗಲಾಗುತ್ತಿದೆ. ಇದರ ಬಗ್ಗೆ ಈಗಾಗಲೇ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಗ್ರಾಮದ ಅರ್ಹ ಪಡಿತರ ಫಲಾನುಭವಿಗಳು ನ್ಯಾಯಾಲಯಕ್ಕೂ ರಿಟ್ ಅರ್ಜಿ ಸಲ್ಲಿಸಿದ್ದು ನ್ಯಾಯಾಲಯ ಆದೇಶ ಮಾಡಿದರೂ ಸಮರ್ಪಕವಾಗಿ ಪಡಿತರ ವಿತರಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ರೈತ ವೀರನಗೌಡ ಪೊಲೀಸ್ ಪಾಟೀಲ ಮಾತನಾಡಿ, ಸಂಘದ ಕಾರ್ಯದರ್ಶಿ ಅವ್ಯವಹಾರಗಳಲ್ಲಿ ಭಾಗಿಯಾಗಿದ್ದು, ರೈತರನ್ನು ವಂಚಿಸಿದ್ದಾರೆ ಎಂದು ದೂರಿದರು.

ರೈತ ವೆಂಕನಗೌಡ ಗೌಡರ ಮಾತನಾಡಿ, ಪಡಿತರ ವ್ಯವಸ್ಥೆಯಲ್ಲಿಯೂ ಅಕ್ರಮ ಎಸಗುತ್ತಿದ್ದು, ಪಡಿತರ ಹಂಚಿಕೆಯ ಕಮಿಷನ್ ಸೇರಿದಂತೆ ಯಾವುದೇ ಹಣವನ್ನು ಸಂಘದ ಖಾತೆಗೆ ಜಮಾ ಮಾಡದೆ ವಂಚಿಸಲಾಗಿದೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

ಹಿರೇಹಾಳ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಸದಸ್ಯರು ಹಾಗೂ ರೈತರಿಂದ ದೂರುಗಳು ಬಂದಿದ್ದು, ಈ ಕುರಿತು ತನಿಖೆ ನಡೆಸಲಾಗುವುದು. ಪ್ರಶಾಂತ ಮುಧೋಳ, ಸಹಕಾರ ಅಭಿವೃದ್ಧಿ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net