

ಗುತ್ತಲ: ರೈತ ಸಂಪರ್ಕ ಕೇಂದ್ರದಿಂದ ಸಹಾಯಧನದಡಿ ಖರೀದಿಸಿದ ಶೇಂಗಾ, ಕಡಲೆ ಹಾಗೂ ಮೆಕ್ಕೆಜೋಳ ಬೀಜ ಬಿತ್ತನೆ ಮಾಡಿ ಹಾನಿಗೊಳಗಾದ ರೈತರು ಶನಿವಾರ ರೈತ ಸಂಪರ್ಕ ಕೇಂದ್ರಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಶಾಕಾರ ಗ್ರಾಮದ ಸುಮಾರು 25 ಎಕರೆ, ಗುತ್ತಲ ಹಾಗೂ ಇತರ ಗ್ರಾಮಗಳ ಸುಮಾರು 43 ಎಕರೆ ಪ್ರದೇಶದಲ್ಲಿ ರೈತ ಸಂಪರ್ಕ ಕೇಂದ್ರದಲ್ಲಿ ಖರೀದಿಸಿ ಬಿತ್ತನೆ ಮಾಡಿದ ಶೇಂಗಾ, ಕಡಲೆ, ಮೆಕ್ಕೆಜೋಳ ಸಮರ್ಪಕ ಬೆಳವಣಿಗೆ ಕಂಡಿರಲಿಲ್ಲ. ಇದನ್ನು ರೈತರು ಅಧಿಕಾರಿಗಳ ಗಮನಕ್ಕೂ ತಂದಿದ್ದರು. ಆದರೆ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಶನಿವಾರ ಹಾನಿಗೊಳಗಾದ ರೈತರು ಕೇಂದ್ರಕ್ಕೆ ಆಗಮಿಸಿ, ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಆಗಮಿಸಿದ ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ ಬಿ.ಎಚ್. ಅವರಿಗೆ, ಬಿತ್ತನೆ ಮಾಡಿರುವ ಬೀಜಗಳು ಬೆಳೆಯದೆ ನಷ್ಟವಾಗಿದೆ. ಪರಿಹಾರ ಕೊಡಿಸಬೇಕು ಎಂದು ರೈತರು ಆಗ್ರಹಿಸಿದರು.
ಬೀಜ ವಿತರಿಸಿದ ಕಂಪನಿ ಅಧಿಕಾರಿಯೊಂದಿಗೆ ಮಾತನಾಡಿದ ವೀರಭದ್ರಪ್ಪ, ನಷ್ಟ ಅನುಭವಿಸಿರುವ ರೈತರು ಖರೀದಿಸಿದ ಪ್ರಮಾಣದಷ್ಟೇ ಬೀಜಗಳನ್ನು ಜ. 6ರಂದು ವಿತರಿಸಲಾಗುವುದು ಎಂದು ಭರವಸೆ ನೀಡಿದರು. ಆದರೆ, ರೈತರು ನಮಗೆ ಗೊಬ್ಬರ ಹಾಗೂ ಹಾನಿ ಪರಿಹಾರ ನೀಡಬೇಕೆಂದು ಪಟ್ಟು ಹಿಡಿದರು.
ಸೋಮವಾರ ಮತ್ತೆ ಹೋರಾಟ: ಕೇಂದ್ರದಿಂದ ಮರಳಿ ಹೋಗುತ್ತಿದ್ದಾಗ ರೈತರೊಬ್ಬರು ಬಿತ್ತನೆ ಬೀಜಗಳನ್ನು ಆದಷ್ಟು ಬೇಗನೆ ನೀಡಿ ಎಂದು ಖಾಸಗಿ ಕಂಪನಿ ಅಧಿಕಾರಿಗೆ ದೂರವಾಣಿ ಮೂಲಕ ಕೇಳಿದ್ದಾರೆ. ಆಗ, ಎಕರೆಗೆ ಒಂದೇ ಪಾಕೆಟ್ ಮಾತ್ರ ನೀಡುವುದಾಗಿ ಖಾಸಗಿ ಕಂಪನಿ ಅಧಿಕಾರಿ ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ರೈತರು, ಸೋಮವಾರ ಮತ್ತೆ ಕೇಂದ್ರದ ಎದುರು ಪ್ರತಿಭಟನೆ ನಡೆಸುವುದಾಗಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಅಧಿಕಾರಿಗಳು ಹೇಳುವುದೇ ಬೇರೆ: ಕಡಲೆಗೆ ಸಿಡಿರೋಗ ತಗುಲಿ ಹಾನಿ ಆಗಿದೆ ಎಂದು ಕೃಷಿ ಅಧಿಕಾರಿಗಳು ಹೇಳುತ್ತಿದ್ದರೆ, ಕಳಪೆ ಬೀಜಗಳನ್ನು ನೀಡಿದ್ದರಿಂದ ಕಡಲೆ ಹಾನಿಗೆ ಒಳಗಾಗಿದೆ ಎಂದು ರೈತರು ಆರೋಪಿಸಿದ್ದಾರೆ.
ಶಿವಕುಮಾರ ತಾವರಗೊಂದಿ, ಕರಬಸಪ್ಪ ಪೂಜಾರ, ಪರಶುರಾಮ ಗಿರಿಯಪ್ಪನವರ, ನಾಗಪ್ಪ ಬೆಂಡಿಗೇರಿ, ಸುರೇಶ ಹೊಸಗೌಡ್ರ, ಲಕ್ಕನಗೌಡ ಹೊಸಗೌಡ್ರ, ಹನುಮಂತಪ್ಪ ಬೆಂಡಿಗೇರಿ, ಲಕ್ಕಪ್ಪ ಬ್ಯಾಲಹುಣಸಿ, ನಾಗಪ್ಪ ಪೂಜಾರ, ಉಮೇಶ ಸಾವಳಗಿ, ರಮೇಶ ಬೆಂಡಿಗೇರಿ ಇತರರಿರಿದ್ದರು.
ನನ್ನ ಹಾಗೂ ನನ್ನ ಕುಟುಂಬದ ಮತ್ತೊಂದು ಜಮೀನು ಸೇರಿ ಒಟ್ಟು 10 ಎಕರೆ ಪ್ರದೇಶಲ್ಲಿ ಬೆಳೆದಿದ್ದ ಮೆಕ್ಕಜೋಳದ ಬೆಳೆ ಹಾನಿಯಾಗಿದೆ. ಈ ಬಗ್ಗೆ ಸ್ಥಳಕ್ಕೆ ಆಗಮಿಸಿ ಕೃಷಿ ವಿಜ್ಞಾನಿಗಳು ಹಾಗೂ ಅಧಿಕಾರಿಗಳು ಪರಿಶೀಲನೆ ನಡೆಸಿ ಹೋದ ನಂತರ ವರದಿ ಕಳುಹಿಸಿದ್ದಾರೆ.ಆದರೆ, ನಮ್ಮ ಹೆಸರುಗಳೇ ಬದಲಾವಣೆಯಾಗಿದೆ. ಹಾನಿಗೆ ಒಳಗಾದ ನಮಗೆ ಸಂಬಂಧಿದವರು ಪರಿಹಾರ ನೀಡಬೇಕು.
| ಪರಶುರಾಮ ಗಿರಿಯಪ್ಪನವರ, ಹಾನಿಗೆ ಒಳಗಾದ ರೈತ, ಗುತ್ತಲ
ಶೇಂಗಾ ಬಿತ್ತನೆ ಬೀಜ ಪಡೆದು ಹಾನಿಗೆ ಒಳಗಾದ ಸುಮಾರು 23 ಎಕರೆ ಪ್ರದೇಶದ ಸರ್ವೆ ಆಗಿದೆ. 23 ಎಕರೆ ಪ್ರದೇಶಕ್ಕೆ ಬಿತ್ತನೆ ಬೀಜಗಳನ್ನು ಪುನಃ ಕೊಡಲಾಗುವುದು. ಹಾನಿಗೆ ಒಳಗಾದ ಉಳಿದ ರೈತರ ಜಮೀನುಗಳನ್ನು ಸರ್ವೆ ಮಾಡಿ, ಅವರಿಗೂ ಬಿತ್ತನೆ ಬೀಜ ವಿತರಿಸಲಾಗುವುದು.
| ವೀರಭದ್ರಪ್ಪ ಬಿ.ಎಚ್., ಸಹಾಯಕ ಕೃಷಿ ನಿರ್ದೇಶಕ ಹಾವೇರಿ