ಫೆ.18ರಿಂದ ಸಿಡಿಲು ಮಲ್ಲಿಕಾರ್ಜುನಸ್ವಾಮಿ ಜಾತ್ರೆ

30BTP001
ಬೆಟ್ಟದಪುರದ ಶ್ರೀ ಭ್ರಮರಾಂಬ ಸಮೇತ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಹುಣಸೂರು ಉಪವಿಭಾಗಾಧಿಕಾರಿ ಮೊಹಮ್ಮದ್ ಹಾರಿಸ್ ಸುಮೈರ್ ಮಾತನಾಡಿದರು. ಕುಂಜಿ ಅಹಮದ್, ಗಿರೀಶ್, ದೀಪಕ್, ಪ್ರಕಾಶ್ ಎಂ ಎತ್ತಿನಮನಿ, ಡಾ.ಸೋಮಯ್ಯ, ಪ್ರಶಾಂತ್, ಡಾ.ಪೂಜಾ ಇದ್ದರು.
Published on

ಬೆಟ್ಟದಪುರ: ಐತಿಹಾಸಿಕ ಹಿನ್ನೆಲೆ ಇರುವ ಬೆಟ್ಟದಪುರದ ಶ್ರೀ ಸಿಡಿಲು ಮಲ್ಲಿಕಾರ್ಜುನಸ್ವಾಮಿ ಜಾತ್ರಾ ಮಹೋತ್ಸವ ಫೆ.18 ರಿಂದ ಫೆ.26ರವರೆಗೆ ನಡೆಯಲಿದ್ದು, ಜಾತ್ರೆ ಯಶಸ್ವಿಗೆ ಎಲ್ಲ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಭಕ್ತರು ಸಹಕರಿಸಬೇಕು ಎಂದು ಹುಣಸೂರು ಉಪವಿಭಾಗಾಧಿಕಾರಿ ಮೊಹಮ್ಮದ್ ಹಾರಿಸ್ ಸುಮೈರ್ ಮನವಿ ಮಾಡಿದರು.

ಬೆಟ್ಟದಪುರದ ಶ್ರೀ ಭ್ರಮರಾಂಬ ಸಮೇತ ಸಿಡಿಲು ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಮಂಗಳವಾರ ಆಯೋಜಿಸಿದ್ದ ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಗ್ರಾಮ ಪಂಚಾಯಿತಿಯವರು ಗ್ರಾಮದ ನೈರ್ಮಲ್ಯ, ಕುಡಿಯುವ ನೀರಿನ ಪೂರೈಕೆಗೆೆ ಹೆಚ್ಚಿನ ಒತ್ತು ನೀಡಬೇಕು. ಆರೋಗ್ಯ ಇಲಾಖೆ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸುವ ಮೂಲಕ ಭಕ್ತರ ಆರೋಗ್ಯದ ಬಗ್ಗೆ ನಿಗಾ ವಹಿಸಬೇಕು. ವಿದ್ಯುತ್ ಇಲಾಖೆ ದೀಪಾಲಂಕಾರ ವ್ಯವಸ್ಥೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಅರ್ಚಕ ಸತೀಶ್ ಕಶ್ಯಪ ಮಾತನಾಡಿ, ಶ್ರೀ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಜಾತ್ರೆ ಫೆ.18ರಿಂದ ಫೆ.26ರವರೆಗೆ ನಡೆಯಲಿದ್ದು, ಗಿರಿಜಾ ಕಲ್ಯಾಣ ಮಹೋತ್ಸವವನ್ನು ಫೆ.23ರಂದು ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದೆ. ಫೆ.24ರಂದು ಬ್ರಹ್ಮರಥೋತ್ಸವ ಜರುಗಲಿದೆ ಎಂದು ಮಾಹಿತಿ ನೀಡಿದರು.

ಫೆ.12ಕ್ಕೆ ಜಾನುವಾರು ಜಾತ್ರೆ: ಫೆ.12ರಿಂದ 5-6 ದಿನಗಳ ಕಾಲ ಜಾನುವಾರು ಜಾತ್ರೆ ನಡೆಯಲಿದೆ. ಸ್ಥಳದಲ್ಲಿಯೇ ಪಶು ಚಿಕಿತ್ಸೆ ತೆರೆಯಲಾಗುವುದು ಎಂದು ಪಶು ಸಂಗೋಪನಾ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕ ಡಾ.ಸೋಮಯ್ಯ ಹೇಳಿದರು.

ರಥೋತ್ಸವ ದಿನ ಮೂರು ರಥಗಳನ್ನು ಎಳೆಯಲಾಗುತ್ತದೆ. ಅದರಲ್ಲಿ ಎರಡು ರಥಗಳು ಸಂಪೂರ್ಣ ಶಿಥಿಲವಾಗಿದ್ದು, ಅವುಗಳನ್ನು ದುರಸ್ತಿ ಮಾಡಬೇಕು. ಜಾತ್ರೆಗೆ ಸರ್ಕಾರದಿಂದ ಬರುವ ಅನುದಾನ ಸಾಲುವುದಿಲ್ಲ. ಈ ಬಗ್ಗೆ ಇಲಾಖೆ ಅಧಿಕಾರಿಗಳು ಹೆಚ್ಚಿನ ಅನುದಾನ ಬಿಡುಗಡೆಗೆ ಕ್ರಮ ವಹಿಸಬೇಕು ಎಂದು ಭಕ್ತರು ಹಾಗೂ ಗ್ರಾಮಸ್ಥರು ಬೇಡಿಕೆ ಇಟ್ಟರು.

ಈ ಬೇಡಿಕೆಗೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಕುಂಜಿ ಅಹಮ್ಮದ್, ರಥಗಳ ದುರಸ್ತಿಗೆ ಕ್ರಮ ವಹಿಸಲಾಗುವುದು. ಇನ್ನು ಹೆಚ್ಚಿನ ಅನುದಾನ ಕೋರಿಕೆಯ ಬಗ್ಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶ್, ಪೊಲೀಸ್ ವೃತ್ತ ನಿರೀಕ್ಷಕ ದೀಪಕ್, ಪಿಎಸ್‌ಐ ಪ್ರಕಾಶ್ ಎಂ.ಎತ್ತಿನಮನಿ, ಸೆಸ್ಕ್ ಎಇಇ ಪ್ರಶಾಂತ್, ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪೂಜಾ, ಪಿಡಿಒ ಮಂಜುನಾಥ್, ಉಪತಹಸೀಲ್ದಾರ್ ಶಶಿಧರ್, ಕಂದಾಯ ನಿರೀಕ್ಷಕ ಅಜ್ಮಾಲ್ ಷರೀಫ್ ಸೇರಿದಂತೆ ಸಿಬ್ಬಂದಿ, ಮುಖಂಡರು, ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net