ಮತಾಂಧ ಶಕ್ತಿಗಳಿಗೆ ಸಿದ್ದು ಪ್ರೇರಣೆ

prahlad joshi
Published on

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ತುಷ್ಟೀಕರಣದ ಪಾರಾಕಾಷ್ಠೆ ಮುಗಿಲುಮುಟ್ಟಿದೆ. ಮತಾಂಧ ಮುಸ್ಲಿಮರು ದೇಶದಲ್ಲಿನ ಸೌಹಾರ್ದತೆ ಕೆಡಿಸಿ ಮತೀಯ ಭಾವನೆ ಕೆರಳಿಸುತ್ತಿದ್ದಾರೆ. ಇದಕ್ಕೆ ಕುಮ್ಮಕ್ಕು ನೀಡುತ್ತಿರುವುದು ಎಡಪಂಥೀಯ ಹಾಗೂ ಮತಾಂಧ ಶಕ್ತಿಗಳಿಗೆ ಪ್ರೇರಣೆ ಕೊಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತರಾಟೆಗೆ ತೆಗೆದುಕೊಂಡರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳಕ್ಕೆ ಬುಲ್ಡೋಜರ್ ಹಚ್ಚಿದವರನ್ನು ಎಷ್ಟು ಜನರನ್ನು ಬಂಧಿಸಿದ್ದೀರಿ? ಎಂದು ಪ್ರಶ್ನೆ ಮಾಡಿದರಲ್ಲದೆ, ಮಸೀದಿ ಬಗ್ಗೆ ಮಾತನಾಡಿದವರನ್ನು ಬಂಧಿಸುತ್ತಿದ್ದೀರಿ. ಇದರರ್ಥ ಜನರಿಗೆ ತಿಳಿದಿದೆ ಎಂದು ವಾಗ್ದಾಳಿ ನಡೆಸಿದರು.

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಯಾವ ಆಧಾರದ ಮೇಲೆ ಮಾಡುತ್ತಿದ್ದಾರೆ? ಕುರುಬ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್ ಎಂದು ಗುರುತಿಸಲಾಗಿದೆ. ಮತಾಂತರ ಆದವರಿಗೆ ಮೀಸಲಾತಿ ಸಿಗುವುದಿಲ್ಲ. ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಮೀಸಲಾತಿ ನೀಡಲಾಗುತ್ತಿದೆ. ಇದು ಗೊತ್ತಿದ್ದರೂ ನಕಲಿ ಗಾಂಧಿ ಕುಟುಂಬದ ಸೂಚನೆಯಂತೆ ಮತಾಂತರ ಆದವರನ್ನೂ ಲೆಕ್ಕ ಮಾಡಿ ಅವರಿಗೂ ಮೀಸಲಾತಿ ಕೊಡಲು ಈ ರೀತಿಯ ಸಮೀಕ್ಷೆ ಮಾಡಲಾಗುತ್ತಿದೆ. ಹಿಂದು ಸಮಾಜವನ್ನು ಒಡೆದು ಹಾಕಿ, ದೇಶ ಅಶಕ್ತಗೊಳಿಸುವ ಕೆಲಸದಲ್ಲಿ ಕಾಂಗ್ರೆಸ್ ಭಾಗಿಯಾಗುತ್ತಿದೆ ಎಂದು ದೂರಿದರು.

ಕೇಂದ್ರ ಸರ್ಕಾರ ಜನಗಣತಿ ಮಾಡುತ್ತದೆ. ರಾಜ್ಯ ಸರ್ಕಾರ ಮಾಡುವ ಸಮೀಕ್ಷೆಗೆ ಯಾವುದೇ ಅಧಿಕೃತ ಮಾನ್ಯತೆ ಇಲ್ಲ. ಸಮೀಕ್ಷೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರೂ ಒಪ್ಪುತ್ತಿಲ್ಲ. ಯಾಕೆಂದರೆ, ತಮ್ಮ ಲೀಡರ್‌ಶಿಪ್ ಹೋಗುತ್ತದೆ ಎಂಬ ಭಯ ಅವರಿಗಿದೆ. ಕಾಂಗ್ರೆಸ್‌ನ ಯಾರೊಬ್ಬರೂ ಇಷ್ಟಪಡುತ್ತಿಲ್ಲ. ಬೇರೆ ಸಮುದಾಯದವರೂ ವಿರೋಧ ಮಾಡುತ್ತಿದ್ದಾರೆ ಎಂದು ವಿಶ್ಲೇಷಿಸಿದರು.

ಮತಪಟ್ಟಿಗೆ ಹೆಸರು ಸೇರಿಸಲು, ಡಿಲೀಟ್ ಮಾಡಲು ಏಕಾಏಕಿ ಬರುವುದಿಲ್ಲ. ಇದಕ್ಕೇ ಆದ ನಿಯಮಾವಳಿಗಳು ಇವೆ ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತರು ಹೇಳಿದ್ದಾರೆ. ಆದರೂ ಸಾಮಾನ್ಯ ಜ್ಞಾನ ಇಲ್ಲದ ರಾಹುಲ್ ಗಾಂಧಿ, ಯಾರೋ ಬರೆದುಕೊಟ್ಟಿದ್ದನ್ನು ಹೇಳಿಬಿಟ್ಟಿದ್ದಾರೆ. ತಮಗೆ ಮತ ಹಾಕಿಲ್ಲ ಎಂಬ ಕಾರಣಕ್ಕೂ ಆರೋಪ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ, ಸಂವಿಧಾನಬದ್ಧ ಸಂಸ್ಥೆಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಬ್ಯಾಲೆಟ್ ಪೇಪರ್ ಆಧಾರದ ಮೇಲೆ ವಿಧಾನಸಭೆ, ಲೋಕಸಭೆ ಚುನಾವಣೆ ಮಾಡಲು ಬರುವುದಿಲ್ಲ. ಟ್ಯಾಂಪರ್ ಪ್ರೂಪ್ ಇದೆ. ಇದು ಸ್ವತಂತ್ರ ಯಂತ್ರ. ಇಂಥ ಮತದಾನ ಪದ್ಧತಿಯನ್ನು ಬೇರೆ ರಾಷ್ಟ್ರಗಳೂ ಹೊಂದಿಲ್ಲ. ಅಷ್ಟೊಂದು ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಇದೇ ವಿಷಯಕ್ಕೆ ಆರ್‌ಜೆಡಿ ಇಂಡಿ ಒಕ್ಕೂಟದಿಂದ ಹೊರಬರುತ್ತಿದೆ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net