

ಚಿಕ್ಕಮಗಳೂರು: ಬಹಳ ಜನ ತಲೆ ಅಲ್ಲಾಡಿಸಿ ಜಗತ್ತು ಅಲ್ಲಾಡುತ್ತಿದೆ ಎಂದುಕೊಳ್ಳುತ್ತಾರೆ. ಇಂಥದ್ದೇ ಭ್ರಮೆ ಸಿದ್ದರಾಮಯ್ಯ ಅವರಿಗೂ ಆಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಲೇವಡಿ ಮಾಡಿದರು.
ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಶನಿವಾರ ಸುದ್ದಿಗಾರರ ಜತೆ ಪ್ರತಿಕ್ರಿಯಿಸಿದ ರವಿ, ಸಿದ್ದರಾಮಯ್ಯ ಅವರಿಗೆ ತಲೆ ಅಲುಗಾಡುತ್ತಿದ್ದು, ಅದೇ ಕಾರಣಕ್ಕೆ ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತಿದೆ ಎಂದುಕೊಂಡಿದ್ದಾರೆ. ಐದು ವರ್ಷ ಅವರೇ ಮುಖ್ಯಮಂತ್ರಿ ಆಗಿದ್ದರು. ಆಗೇನೂ ಕುರ್ಚಿ ಅಲುಗಾಡಲಿಲ್ಲ. ಹಾಗೆ ಅಲುಗಾಡುವ ಕುರ್ಚಿ ಅದಲ್ಲ ಎಂದರು.
ಪ್ರಶ್ನಾತೀತರಾಗುಳಿದಿಲ್ಲ:
ಸಿದ್ದರಾಮಯ್ಯ ಹೇಳಿರುವಷ್ಟು ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಗ್ರಾಪಂ ಚುನಾವಣೆ ಗೆದ್ದಿಲ್ಲ. ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಶೇ.40ರಷ್ಟು ಸ್ಥಾನ ದಾಟಿರಲಿಲ್ಲ. ಈಗ ಅವರಿರುವ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಕೂಡ ಕಾಂಗ್ರೆಸ್‍ನಲ್ಲಿ ಪೈಪೋಟಿ ಆರಂಭವಾಗಿದ್ದು, ಅವರು ಪ್ರಶ್ನಾತೀತ ನಾಯಕರಾಗಿ ಉಳಿದಿಲ್ಲ ಎನ್ನುವುದನ್ನು ಕಾಂಗ್ರೆಸ್ ನಾಯಕರೇ ಸ್ಪಷ್ಟಪಡಿಸಿದ್ದಾರೆ. ಹೀಗಿರುವಲ್ಲಿ ಹೆಚ್ಚು ಸ್ಥಾನ ಗಳಿಸಿದ್ದಾಗಿ ಹೇಳಿಕೊಳ್ಳಲು ಅವರಿಗೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಆಯಾ ಜಿಲ್ಲೆಗಳಲ್ಲಿ ಬಿಜೆಪಿ ಬೆಂಬಲಿತರು ಎಷ್ಟು ಪ್ರಮಾಣದಲ್ಲಿ ಗೆದ್ದಿದ್ದಾರೆ ಎನ್ನುವುದನ್ನು ಮಾಧ್ಯಮಗಳೇ ವಸ್ತುನಿಷ್ಠವಾಗಿ ವರದಿ ಮಾಡಿವೆ. ಮುಂದೆ ಗ್ರಾಪಂ ಸದಸ್ಯರನ್ನು ಆಧರಿಸಿಯೇ ಪರಿಷತ್ ಚುನಾವಣೆ ನಡೆಯಲಿದೆ. ಅಲ್ಲಿ ಕಾಂಗ್ರೆಸಿಗರು ಬಲ ಪ್ರದರ್ಶನ ನಡೆಸಲಿ. ಅವರು ಶೇ.60ರಷ್ಟು ಗ್ರಾಪಂಗಳಲ್ಲಿ ಬೆಂಬಲಿತರನ್ನು ಗೆಲ್ಲಿಸಿಕೊಂಡಿದ್ದರೆ ಪರಿಷತ್ ಚುನಾವಣೆಯಲ್ಲೂ ಅಷ್ಟೇ ಪ್ರಮಾಣದಲ್ಲಿ ಗೆಲ್ಲಬೇಕಾಗುತ್ತದೆ. ಅದನ್ನೂ ನೋಡೋಣ ಎಂದು ಸವಾಲೆಸೆದರು.
ಶೇ.60ಕ್ಕೂ ಹೆಚ್ಚು ಗ್ರಾಪಂ ಅಧಿಕಾರ
ರಾಜ್ಯದಲ್ಲಿ 41 ಸಾವಿರಕ್ಕೂ ಹೆಚ್ಚು ಬಿಜೆಪಿ ಬೆಂಬಲಿತರು ಗ್ರಾಪಂಗೆ ಆಯ್ಕೆಯಾಗಿದ್ದು ಶೇ.60ಕ್ಕೂ ಹೆಚ್ಚು ಗ್ರಾಪಂಗಳಲ್ಲಿ ಅಧಿಕಾರ ಹಿಡಿಯಲಿದ್ದಾರೆ. ಇದು ಸಂಭ್ರಮದ ಕ್ಷಣ. ಈ ಕಾರಣಕ್ಕೆ ಸದಸ್ಯರನ್ನು ಅಭಿನಂದಿಸಿರುವುದಾಗಿ ಹೇಳಿದರು.
ಶಿವಮೊಗ್ಗದಲ್ಲಿ ಜ.3 ರಂದು ನಡೆಯುವ ಪಕ್ಷದ ಕಾರ್ಯಕಾರಿಣಿಯಲ್ಲಿ ಪ್ರಮುಖ ಅಂಶಗಳ ಬಗ್ಗೆ ಸಮಾಲೋಚನೆ ನಡೆಯಲಿವೆ. 2023ರ ವಿಧಾನಸಭೆ ಚುನಾವಣೆಗೆ ಪೂರ್ವಭಾವಿಯಾಗಿ ತಾಪಂ, ಜಿಪಂ, ನಗರಸಭೆ, ಪುರಸಭೆ, ನಗರಪಾಲಿಕೆ ಚುನಾವಣೆ - ಹೀಗೆ ಸರಣಿ ಚುನಾವಣೆಗಳು ನಡೆಯಲಿವೆ. ಸ್ಥಳೀಯ ಸಂಸ್ಥೆಗಳಿಂದ ಪರಿಷತ್ತಿಗೆ ಹಾಗೂ ವಿವಿಧ ಕ್ಷೇತ್ರಗಳಿಗೆ ಉಪಚುನಾವಣೆಗಳು ನಡೆಯಲಿವೆ. ಅವುಗಳನ್ನು ಗೆಲ್ಲುವ ಕುರಿತು, ಜನಸ್ನೇಹಿ ಆಡಳಿತ ಹಾಗೂ ಅಭಿವೃದ್ಧಿ ಯೋಜನೆಗಳನ್ನು ಇಟ್ಟುಕೊಂಡು ಕೆಲಸ ಮಾಡಬೇಕಾದ ಹೊಣೆಗಾರಿಕೆ ಬಗ್ಗೆ ಚರ್ಚೆಯಾಗಲಿರುವುದಾಗಿ ತಿಳಿಸಿದರು.