ಸಿದ್ದರಾಮಯ್ಯ ಸೋಲಿಗೆ ಈಗ ಕಾರಣ ಹುಡುಕುತ್ತಿದ್ದಾರೆ: ಸಿ.ಟಿ.ರವಿ

c.t.ravi
Published on

ಚಿಕ್ಕಮಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಎರಡೂವರೆ ವರ್ಷದ ಬಳಿಕ ತಮ್ಮ ಸೋಲಿಗೆ ಕಾರಣ ಹುಡುಕುತ್ತಿದ್ದಾರೆ. ಯಾರೂ ಉಗಿದಿದ್ದನ್ನು ಬಾಯಿಗೆ ಹಾಕಿಕೊಳ್ಳುವುದಿಲ್ಲ. ಸೋಲಿಗೆ ಕಾರಣ ಗೊತ್ತಿದ್ದರೂ ಮತ್ಯಾಕೆ ಜೆಡಿಎಸ್‍ನವರ ಜತೆ ಸೇರಿ ಸರ್ಕಾರ ರಚಿಸಿದಿರಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ಸೇರಿದಂತೆ ನಮ್ಮ ಪಕ್ಷದವರೂ ತಮ್ಮ ಸೋಲಿಗೆ ಕಾರಣ ಎಂದು ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ರವಿ, ಚಿಕ್ಕಮಕ್ಕಳು ಸಹ ಚಾಕೊಲೆಟ್ ಅನ್ನು ನೆಲಕ್ಕೆ ಉಗಿದರೆ ಮತ್ತೆ ಬಾಯಿಗೆ ಹಾಕಿಕೊಳ್ಳುವುದಿಲ್ಲ. ಅವರೇಕೆ ಹಾಕಿಕೊಂಡರು ಎಂದು ಕೇಳಿದರು.

ದಾರಿ ಹುಡುಕಬೇಕಿತ್ತು
ಕಾಂಗ್ರೆಸ್‍ಗೆ ಜನಾಭಿಪ್ರಾಯ ಇಲ್ಲ. ವಿರೋಧ ಪಕ್ಷದಲ್ಲಿ ಕೂರುವುದಾಗಿ ರಾಜ ಮರ್ಯಾದೆಯ ದಾರಿ ಹುಡುಕಬೇಕಿತ್ತು. ಯಾರಾದರೂ ತನ್ನನ್ನು ಸೋಲಿಸಿದವರ ಜತೆ ಸೇರಿ ಸರ್ಕಾರ ರಚಿಸುತ್ತಾರೆಯೇ? ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಬೇಕೆಂದು ಒಟ್ಟಾದರು. ಯಾವ ಮುಖ ಇಟ್ಟುಕೊಂಡು ಅದಕ್ಕೆ ಒಪ್ಪಿಕೊಂಡಿದ್ದರು. ಇದು ನೈತಿಕ ರಾಜಕಾರಣವೇ ಎಂದು ಪ್ರಶ್ನಿಸಿದರು.

ಕೈಗೆಟುಕದ ದ್ರಾಕ್ಷಿ ಹುಳಿ
ಇಂತಹ ರಾಜಕಾರಣ ಮಾಡಿ ಕೈಗೆಟುಕದ ದ್ರಾಕ್ಷಿ ಹುಳಿ ಎನ್ನುವ ರೀತಿ ಕಥೆ ಹೇಳಿದರೆ ಯಾರು ಕೇಳುತ್ತಾರೆ. ಸರ್ಕಾರ ಉಳಿಸಲು ಕಡೇ ಗಳಿಗೆವರೆಗೆ ಪ್ರಯತ್ನ ಎಂದಿದ್ದರಲ್ಲ, ಅದನ್ನೇಕೆ ಮಾಡಬೇಕಿತ್ತು ಎಂದು ಪ್ರಶ್ನಿಸಿದರು.

ಈಗಷ್ಟೆ ಅವರ ಸೋಲಿಗೆ ಕಾರಣ ಏನು ಎಂಬ ಜ್ಞಾನೋದಯವಾಗಿದೆ. ಅವರಿಗೆ ಚಾಮುಂಡೇಶ್ವರಿಯಲ್ಲಿ ಬಿಜೆಪಿ, ಜೆಡಿಎಸ್ ಸೇರಿ ನಮ್ಮನ್ನು ಸೋಲಿಸಿವೆ ಎಂದು ಹೇಳಿದ್ದಾರೆ. ನಾವು ಎಂದಿಗೂ ಕಾಂಗ್ರೆಸ್ ಪಕ್ಷದ ಮಿತ್ರರಾಗಿರಲೇ ಇಲ್ಲ. ನಾವು ಕಾಂಗ್ರೆಸನ್ನು ಸೋಲಿಸಲೇಬೇಕು ಎಂದು ಪ್ರಯತ್ನ ಮಾಡಿದ್ದೆವು. ಎಲ್ಲೆಲ್ಲಿ ಏನೇನು ತಂತ್ರಗಾರಿಕೆ ಮಾಡಬೇಕೊ ಅದನ್ನೆಲ್ಲ ಮಾಡಿದ್ದೇವು ಎಂದು ಹೇಳಿದರು.

ಸಿದ್ದರಾಮಯ್ಯ ತಮ್ಮ ಸೋಲಿಗೆ ಕಾರಣ ಹುಡುಕುವ ಬದಲು ಅವರ ಸರ್ಕಾರ ಅಧಿಕಾರ ಕಳೆದುಕೊಂಡಿದ್ದಕ್ಕೆ ಕಾರಣ ಹುಡುಕಬೇಕು. ಅತಿಯಾದ ಓಲೈಕೆ ನೀತಿ, ಭ್ರಷ್ಟಾಚಾರ, ಕೆಟ್ಟ ಆಡಳಿತ, ದುರಹಂಕಾರದ ಆಡಳಿತದ ಕಾರಣಕ್ಕೆ ಅಧಿಕಾರ ಕಳೆದುಕೊಳ್ಳಬೇಕಾಯಿತು ಎಂದರು.

ಒಪ್ಪಂದವಾಗಿದ್ದರೆ ಬಾದಾಮಿಯಲ್ಲೂ ಸೋಲು
ದುರಹಂಕಾರವನ್ನು ರಾಜ್ಯದ ಜನ ಸಹಿಸುವುದಿಲ್ಲ. ಅವರ ಸಂಪುಟದ ಹಲವು ಸಚಿವರು ಸೋತರು. ಅದಕ್ಕೂ ಕಾರಣ ಹುಡುಕಬೇಕಲ್ಲ, ಮುಕ್ತ ಮನಸ್ಸಿನಿಂದ ಅವಲೋಕನ ಮಾಡಿದರೆ ಸೋಲಿನ ಕಾರಣ ಗೊತ್ತಾಗುತ್ತದೆ. ಒಂದು ವೇಳೆ ಬಿಜೆಪಿ, ಜೆಡಿಎಸ್ ಬಾದಾಮಿಯಲ್ಲಿ ಒಳ ಒಪ್ಪಂದ ಮಾಡಿಕೊಂಡಿದ್ದರೆ ಅವರು ಅಲ್ಲೂ ಸೋಲುತ್ತಿದ್ದರು. ಅವರು ಗೆದ್ದಿದ್ದು ಕೇವಲ ಸಾವಿರ ಚಿಲ್ಲರೆ ಮತಗಳಿಂದ ಸಿಎಂ ಆದವರಿಗೆ ಅದು ಗೌರವ ತರುವ ವಿಚಾರವೇ ಅಲ್ಲ. ಅಷ್ಟಕ್ಕೂ ಅಲ್ಲೊಂದು ರೀತಿಯಲ್ಲಿ ಸೋತ ಹಾಗೆಯೆ ಎಂದು ಲೇವಡಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net