

ಕಾರವಾರ: ಸಿದ್ದಿ ಸಮುದಾಯದ ಕುಟುಂಬಗಳಿಗೆ ಕಳೆದ ಜೂನ್‌ನಿಂದ ನೀಡಬೇಕಿದ್ದ ಪೌಷ್ಟಿಕ ಆಹಾರ ನವೆಂಬರ್ ಕಳೆದರೂ ಪೂರೈಕೆಯಾಗಿಲ್ಲ.
ಸಿದ್ದಿ ಕುಟುಂಬಗಳು ಅರಣ್ಯ ಉತ್ಪನ್ನಗಳನ್ನು ನಂಬಿ ಜೀವನ ನಡೆಸುತ್ತವೆ. ಅವರಿಗೆ ಪೌಷ್ಟಿಕ ಆಹಾರ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಸರ್ಕಾರ 2011 ರಿಂದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ 6 ತಿಂಗಳ ಕಾಲ ಆಹಾರದ ಕಿಟ್ ನೀಡುವ ಯೋಜನೆಯನ್ನು ಜಾರಿಗೆ ತಂದಿತ್ತು.
5 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯ 7 ತಾಲೂಕುಗಳ ನಾಲ್ಕುವರೆ ಸಾವಿರ ಕುಟುಂಬಗಳಿಗೆ ಜೂನ್‌ನಿಂದ ನವೆಂಬರ್‌ವರೆಗೆ ಆಹಾರದ ಕಿಟ್‌ಗಳನ್ನು ಅವರವರ ಊರುಗಲ್ಲೇ ವಿತರಿಸಲಾಗುತ್ತಿತ್ತು. ಆದರೆ, ಈ ವರ್ಷ ಅವಧಿ ಕಳೆದರೂ ಪೂರೈಕೆಯಾಗಿಲ್ಲ. ಇಲಾಖೆಯ ಅಧಿಕಾರಿಗಳನ್ನು ಕೇಳಿದರೆ, ಇನ್ನೂ ಟೆಂಡರ್ ಆಗಿಲ್ಲ ಎಂಬ ಉತ್ತರ ಬರುತ್ತಿದೆ ಎನ್ನುತ್ತಾರೆ ಎಂದು ಎಂದು ಯಲ್ಲಾಪುರದ ಕರ್ನಾಟಕ ರಾಜ್ಯ ಸಿದ್ದಿ ಬುಡಕಟ್ಟು ಜನಪರ ಸಂಘದ ಗೌರವ ಅಧ್ಯಕ್ಷ ಜಾನ್ ಕೋಸ್ತಾ ಸಿದ್ದಿ ಆರೋಪಿಸಿದ್ದಾರೆ.
ವಿಳಂಬವೇಕೆ..?
ಬಿಪಿಎಲ್ ಕುಟುಂಬಗಳಿಗೆ ಸಾಮಾನ್ಯ ಪಡಿತರ ಯೋಜನೆಯಲ್ಲಿ ಅಕ್ಕಿ ನೀಡಲಾಗುತ್ತದೆ. ಅದರ ಜತೆಗೆ ಸಿದ್ದಿ ಕುಟುಂಬಗಳಿಗೆ ಮಾತ್ರ ಹೆಚ್ಚುವರಿಯಾಗಿ 6 ತಿಂಗಳು 8 ಕೆಜಿ ಅಕ್ಕಿ, 3 ಕೆಜಿ ತೊಗರಿ ಬೇಳೆ, 1 ಕೆಜಿ ಕಡಲೆಕಾಳು, 1 ಕೆಜಿ ಶೇಂಗಾ, 1 ಕೆಜಿ ಅಲಸಂದೆ, 1 ಕೆಜಿ ಹುರಳಿಕಾಳು, 1 ಕೆಜಿ ಹೆಸರುಕಾಳು, 1 ಕೆಜಿ ಸಕ್ಕರೆ, 1ಕೆಜಿ ಬೆಲ್ಲ, 30 ಮೊಟ್ಟೆ, 2 ಲೀಟರ್ ಅಡುಗೆ ಎಣ್ಣೆ, 500 ಗ್ರಾಂ ನಂದಿನಿ ತುಪ್ಪವನ್ನು ಪ್ರತಿ ಕುಟುಂಬಕ್ಕೆ ನೀಡುತ್ತ ಬರಲಾಗುತ್ತಿದೆ.
ಆದರೆ, ಈ ಬಾರಿ ಮೇ ಹೊತ್ತಿಗೆ ವಿಧಾನಸಭೆ ಚುನಾವಣೆ ಬಂದಿದ್ದರಿಂದ ಟೆಂಡರ್ ಕರೆಯಲು ವಿಳಂಬವಾಗಿತ್ತು. ಹೊಸ ಸರ್ಕಾರ 6 ತಿಂಗಳ ಬದಲು ಯೋಜನೆಯನ್ನು 1 ವರ್ಷಕ್ಕೆ ವಿಸ್ತರಿಸಲು ಸೆಪ್ಟೆಂಬರ್ 8 ರಂದು ಆದೇಶ ಹೊರಡಿಸಿದೆ ಎಂಬುದು ಇಲಾಖೆ ಅಧಿಕಾರಿಗಳ ಅಭಿಪ್ರಾಯ.
ಸಿದ್ದಿ ಬುಡಕಟ್ಟು ಕುಟುಂಬಗಳು ಕಾಡಿನಂಚಿನಲ್ಲಿ ವಾಸಿಸುತ್ತಿವೆ. ಹೆಚ್ಚಿನ ಕುಟುಂಬಗಳಿಗೆ ಭೂಮಿ ಇಲ್ಲ. ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸಿ ಮಾರಿಯೇ ಜೀವನ ನಡೆಸುತ್ತವೆ. ಸರ್ಕಾರ ಕೆಲ ವರ್ಷಗಳ ಹಿಂದೆ ಜಾರಿಗೆ ತಂದ ಪೌಷ್ಟಿಕ ಆಹಾರ ಯೋಜನೆಯಿಂದ ನಮಗೆ ಅನುಕೂಲವಾಗಿತ್ತು. ಸರ್ಕಾರ ಏಕೆ ನಿಲ್ಲಿಸಿದೆಯೋ ಗೊತ್ತಿಲ್ಲ. ಈ ಬಗ್ಗೆ ಜಿಲ್ಲಾಽಕಾರಿ ಕಚೇರಿ ಮೂಲಕ ಸರ್ಕಾರಕ್ಕೆ ಮನವಿ ಮಾಡುತ್ತೇವೆ.ಬೆನೇತ್ ಸಿದ್ದಿಅಧ್ಯಕ್ಷ, ಕರ್ನಾಟಕ ರಾಜ್ಯ ಸಿದ್ದಿ ಬುಡಕಟ್ಟು ಜನಪರ ಸಂಘ
ಸಿದ್ದಿ ಸಮುದಾಯಕ್ಕೆ ವರ್ಷದಲ್ಲಿ 6 ತಿಂಗಳು ಮಾತ್ರ ನೀಡುತ್ತಿದ್ದ ಪೌಷ್ಟಿಕ ಆಹಾರವನ್ನು ಈಗ 12 ತಿಂಗಳೂ ನೀಡಲು ಸರ್ಕಾರ ಆದೇಶ ಹೊರಡಿಸಿದೆ. ಆಹಾರ ಪೂರೈಕೆಗೆ 3 ತಿಂಗಳ ತಾತ್ಕಾಲಿಕ ಟೆಂಡರ್ ಪ್ರಕ್ರಿಯೆ ನಡೆದಿದೆ. ಟೆಂಡರ್ ಅಂತಿಮವಾದ ತಕ್ಷಣ ಆಹಾರ ಪೂರೈಕೆ ಪ್ರಾರಂಭಿಸಿ, ಇಡೀ ವರ್ಷವೂ ಒದಗಿಸಲಾಗುವುದು.ವೈ.ಕೆ.ಉಮೇಶಉಪ ನಿರ್ದೇಶಕ, ಪರಿಶಿಷ್ಟ ಪಂಗಡಗಳ ಇಲಾಖೆಕಾರವಾರ