ಸಿದ್ಧೇಶ್ವರ ಶ್ರೀಗಳ ಆಶಯ ಈಡೇರಿಸಿದ್ದು ಎಂಬಿಪಿ

Ramya, Congress, Election
ಬಬಲೇಶ್ವರ ಮತಕ್ಷೇತ್ರದ ಜಾಲಗೇರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಬಿ. ಪಾಟೀಲ ಪರ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಮಾಜಿ ಸಂಸದೆ ಹಾಗೂ ಚಿತ್ರನಟಿ ರಮ್ಯಾ ಅವರಿಗೆ ಅಭಿಮಾನಿಗಳು ಬಸವೇಶ್ವರ ಭಾವಚಿತ್ರ ನೀಡಿ ಸನ್ಮಾನಿಸಿದರು.
Published on

ವಿಜಯಪುರ: ನಡೆದಾಡುವ ದೇವರು ಶ್ರೀ ಸಿದ್ಧೇಶ್ವರ ಶ್ರೀಗಳ ಆಶಯದಂತೆ ವಿಜಯಪುರ ಜಿಲ್ಲೆಯಲ್ಲಿ ನೀರಾವರಿ ಯೋಜನೆ ಸಮರ್ಥವಾಗಿ ಜಾರಿ ಮಾಡಿದ ಹಿರಿಮೆ ಎಂ.ಬಿ. ಪಾಟೀಲರಿಗೆ ಸಲ್ಲಬೇಕು. ಇನ್ನೂ ಹಲವು ಕೆಲಸಗಳು ಬಾಕಿ ಇದ್ದು ಅದನ್ನು ಪೂರ್ಣಗೊಳಿಸಲು ಮತ್ತೊಮ್ಮೆ ಅವರನ್ನು ಗೆಲ್ಲಿಸಿ. ಅವರು ಮತ್ತೆ ಮಂತ್ರಿ ಸ್ಥಾನ ಪಡೆದು ಬರದ ನಾಡನ್ನು ಬಂಗಾರದ ನಾಡನ್ನಾಗಿ ಮಾಡುತ್ತಾರೆ ಎಂದು ಮಾಜಿ ಸಂಸದೆ ಹಾಗೂ ಚಿತ್ರನಟಿ ರಮ್ಯ ಹೇಳಿದರು.

ಬಬಲೇಶ್ವರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಬಿ. ಪಾಟೀಲ ಪರ ಭರ್ಜರಿ ಪ್ರಚಾರ ನಡೆಸಿದ ಅವರು, ಜಾಲಗೇರಿ ಗ್ರಾಮದಲ್ಲಿ ಕಾರಿನಲ್ಲಿ ನಿಂತು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

ನಮ್ಮ ತಂದೆ ನಿಧನರಾದಾಗ ಕಾಂಗ್ರೆಸ್ ಮುಖಂಡ ಎಂ.ಬಿ. ಪಾಟೀಲ ಖುದ್ದು ಮಂಡ್ಯಗೆ ಬಂದು ತಮಗೆ ಸಾಂತ್ವಾನ ಹೇಳಿದ್ದರು. ಇದರ ಜತೆ ಮಂಡ್ಯದಲ್ಲಿ ಸಂಸದ ಸ್ಥಾನಕ್ಕೆ ಸ್ಪರ್ಧಿಸಿದಾಗ ನನ್ನ ಪ್ರಚಾರ ಮಾಡಿದ್ದಾರೆ, ಗುಂಡ್ಲಪೇಟೆ ಹಾಗೂ ನಂಜನಗೂಡಿನಲ್ಲಿ ಸಹ ಪ್ರಚಾರ ಮಾಡಿ ಅಭ್ಯರ್ಥಿಗಳ ಗೆಲುವಿಗೆ ಕಾರಣರಾಗಿದ್ದಾರೆ ಅವರ ಋಣ ನನ್ನ ಮೇಲೆ ಇದೆ ಎಂದರು.
ಎಂ.ಬಿ.ಪಾಟೀಲರು ನನಗೆ ತಂದೆ ಸಮಾನ, ಬಬಲೇಶ್ವರ ಮತಕ್ಷೇತ್ರದ ಮತದಾರರು ಅವರನ್ನು ನಿಮ್ಮ ಅಣ್ಣ, ತಮ್ಮ ಇಲ್ಲವೇ ತಂದೆ ಎಂದು ತಿಳಿದುಕೊಂಡು ಅವರನ್ನು ಬಹುಮತದಿಂದ ಗೆಲ್ಲಿಸಬೇಕು ಎಂದರು.

ಗುಂಡು ಹಾರಿಸುವ ಸಂಸ್ಕೃತಿ ಹೊಂದಿದವರಿಗೆ ನಿಮ್ಮ ಮತ ಹಾಕುವಿರಾ? ಇಲ್ಲ ನೀರು ನೀಡಿದ ವ್ಯಕ್ತಿಗೆ ಮತ ಹಾಕುವಿರಾ? ಎಂದು ಪ್ರಶ್ನಿಸಿದ ಅವರು, ಸಿದ್ಧೇಶ್ವರ ಶ್ರೀಗಳು ಹೇಳಿದಂತೆ ನಡೆದುಕೊಂಡು ಎಲ್ಲರಿಗೂ ಬೊಗಸೆ ನೀರು ನೀಡಿದ ಪುಣ್ಯವಂತ ಎಂ.ಬಿ. ಪಾಟೀಲರು ಅವರ ಕಾರ್ಯವನ್ನು ಮೆಚ್ಚಿ ಅವರಿಗೆ ನಿಮ್ಮ ಮತ ನೀಡಬೇಕು ಎಂದರು.

ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ ಅನ್ನಭಾಗ್ಯ ಯೋಜನೆಯಲ್ಲಿ 10 ಕೆಜಿ ಅಕ್ಕಿ ಉಚಿತ, ಗೃಹಲಕ್ಷ್ಮೀ ಭಾಗ್ಯದಡಿ ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ರೂ. ಡಿಪ್ಲೊಮಾ ಉದ್ಯೋಗವಿಲ್ಲದವರಿಗೆ 3 ಸಾವಿರ ರೂ. ಹಾಗೂ 200 ಯೂನಿಟ್ ವಿದ್ಯುತ್ ಸೇರಿದ ಹಲವು ಅಭಿವೃದ್ಧಿ ಯೋಜನೆಗಳು ಎಲ್ಲರಿಗೂ ತಲುಪಿಸುವ ಕೆಲಸ ಮಾಡುತ್ತೇವೆ ಎಂದರು.

ಈ ವೇಳೆ ಅಭಿಮಾನಿಗಳು ಬಸವೇಶ್ವರ ಭಾವಚಿತ್ರವನ್ನು ಕಾಣಿಕೆಯಾಗಿ ನೀಡಿದರು. ನಂತರ ತಿಕೋಟಾ ಪಟ್ಟಣಕ್ಕೆ ತೆರಳಿದ ರಮ್ಯ ಅಲ್ಲಿನ ಬಸವೇಶ್ವರ ವೃತ್ತದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.

ಈ ವೇಳೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದ ಕಾರಣ ಸ್ವತ ಅವರ ಮೊಬೈಲ್ ತೆಗೆದುಕೊಂಡ ರಮ್ಯ ಅವರ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡರು, ರಮ್ಯಾ ನೋಡಲು ಜನಸಾಗರವೇ ಹರಿದು ಬಂದಿತ್ತು. ಈ ಕಾರಣ ಜಾಲಗೇರಿಯಿಂದ ತಿಕೋಟಾವರೆಗೆ ಟ್ರಾಫಿಕ್ ಜಾಮ್ ಆಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net