

ಮಾಂಜರಿ: ಸಮೀಪದ ಬೇಡಕಿಹಾಳ ಸಿದ್ಧೇಶ್ವರ ದಸರಾ ಮಹೋತ್ಸವದ ಅಂಗವಾಗಿ ಈಚೆಗೆ ಆಯೋಜಿಸಿದ್ದ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಪ್ರಥಮ ಕ್ರಮಾಂಕದ ಜಂಗೀ ನಿಕಾಲಿ ಕುಸ್ತಿಯಲ್ಲಿ ಪುಣೆಯ ಮಹಾರಾಷ್ಟ್ರ ಕೇಸರಿ ಪೈಲ್ವಾನ್ ಪ್ರಕಾಶ ಬಣಕರ ಬ್ರೆಜಿಲ್ ಪೈಲ್ವಾನ್ ಫೆಡರೇಲಾ ಲಿಮಾ ಅವರನ್ನು ಪರಾಭವಗೊಳಿಸಿ ಸಿದ್ಧೇಶ್ವರ ಕೇಸರಿ ಪ್ರಶಸ್ತಿ ಪಡೆದರು.
ದ್ವಿತೀಯ ಕ್ರಮಾಂಕದಲ್ಲಿ ಪುಣೆಯ ಪೈಲ್ವಾನ್ ಮಾವೂಲಿ ಕೋಕಾಟೆ ಇರಾನ್ ಪೈಲ್ವಾನ್ ಮಹಮ್ಮದ್ ಮಿಲ್ಕಿ ಅವರನ್ನು ಪರಾಭವಗೊಳಿಸಿದರು. ತೃತೀಯ ಕ್ರಮಾಂಕದಲ್ಲಿ ಪುಣೆಯ ಪೈಲ್ವಾನ್ ಸುಭೋದ ಪಾಟೀಲ ಹರಿಯಾಣದ ಪೈಲ್ವಾನ್ ವೀರೇಂದ್ರ ಭಿವಾಣಿ ಅವರನ್ನು ಸೋಲಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಕೊಲ್ಲಾಪುರ ಪೈಲ್ವಾನ್ ರಾಘು ಠೋಂಬರೆ ಹರಿಯಾಣದ ಪೈಲ್ವಾನ್ ಚಹಲ್ ವಿರುದ್ಧ ಗೆದ್ದರು. ಐದನೇ ಕ್ರಮಾಂಕದಲ್ಲಿ ಘೋಡಗೇರಿ ಪೈಲ್ವಾನ್ ಪ್ರಕಾಶ ಇಂಗಳಗಿ ಸಾಂಗಲಿಯ ಪೈಲ್ವಾನ್ ಋಷಿಕೇಶ ದೇವಕಾತೆ ವಿರುದ್ಧ ಜಯ ಗಳಿಸಿದರು. ಮನರಂಜನೆಯ ಕುಸ್ತಿಯಲ್ಲಿ ಅಯೋಧ್ಯದ ಪೈಲ್ವಾನ್ ಬಾಬಾ ಲಾಡಿ ಅವರು ಹರಿಯಾಣಾದ ಪೈಲ್ವಾನ್ ಮನಿಷಕುಮಾರ ಅವರನ್ನು ಪರಾಭವಗೊಳಿಸಿದರು.
೧೫೦ಕ್ಕೂ ಹೆಚ್ಚು ಕುಸ್ತಿಪಟುಗಳು ಭಾಗವಹಿಸಿದ್ದರು. ಪೈಲ್ವಾನ್ ಜ್ಯೋತಿರಾಮ ಸಾಂಗಲಿ ನಿರೂಪಿಸಿದರು. ಪ್ರಣವ ಪಾಟೀಲ ಉದ್ಘಾಟಿಸಿದರು. ಸಹಕಾರ ಧುರೀಣ ಉತ್ತಮ ಪಾಟೀಲ, ಅಭಿನಂದನ ಪಾಟೀಲ, ಪೃಥ್ವಿ ಕತ್ತಿ, ವಿಜಯ ಪಾಟೀಲ, ಗಣಪತರಾವ ಪಾಟೀಲ, ಸುನೀಲ ನಾರೆ ಇತರರಿದ್ದರು.