

ವಿಜಯಪುರ: ಪ್ರಸಕ್ತ ಸಾಲಿನಲ್ಲಿ ಶ್ರೀ ಸಿದ್ಧೇಶ್ವರ ಸಹಕಾರಿ ಬ್ಯಾಂಕ್ 3.14 ಕೋಟಿ ಲಾಭ ಗಳಿಸಿದೆ ಎಂದು ಬ್ಯಾಂಕ್‌ನ ಜಿಲ್ಲಾಧ್ಯಕ್ಷ ವಿಜಯಕುಮಾರ ಇಜೇರಿ ತಿಳಿಸಿದರು.
ನಗರದ ವೀರರಾಣಿ ಕಿತ್ತೂರು ಚನ್ನಮ್ಮ ಸಮುದಾಯ ಭವನದಲ್ಲಿ ಭಾನುವಾರ ನಡೆದ 113 ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯದ ಸಹಕಾರಿ ರಂಗದಲ್ಲಿ ಬೆಳೆದ ಕೆಲವೇ ಬ್ಯಾಂಕ್‌ಗಳಲ್ಲಿ ಸಿದ್ಧೇಶ್ವರ ಸಹಕಾರಿ ಬ್ಯಾಂಕ್ ಕೂಡ ಒಂದು. ಠೇವುದಾರರ ನಂಬುಗೆಯಿಂದ ರೂ. 542.55 ಕೋಟಿ ಠೇವು ಹಾಗೂ ರೂ. 642.79 ಕೋಟಿ ದುಡಿಯುವ ಬಂಡವಾಳದೊಂದಿಗೆ ಸದಸ್ಯರ ಗ್ರಾಹಕರ ಹಾಗೂ ನಾಗರಿಕರ ಸಕಲ ಬ್ಯಾಂಕಿಂಗ್ ಸೌಲಭ್ಯಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಬ್ಯಾಂಕ್‌ನ ಎಪಿಎಂಸಿ ಶಾಖೆ ಮತ್ತು ಜೋರಾಪೂರ ಪೇಠ ಶಾಖೆಗಳಲ್ಲಿ ಎಟಿಎಂ ಕೊಠಡಿಗಳು ಈಗಾಗಲೇ ನಿರ್ಮಾಣವಾಗಿದ್ದು, ಮುಂಬರುವ ದಿನಗಳಲ್ಲಿ ಎಟಿಎಂ ಯಂತ್ರಗಳನ್ನು ಅಳವಡಿಸುತ್ತೇವೆ. ಹುಡಕೋ ಕಾಲನಿ ಶಾಖೆ ಹಾಗೂ ಇಂಡಿ ಪಟ್ಟಣ ಶಾಖೆಗಳಲ್ಲಿ ಹಂತ ಹಂತವಾಗಿ ಎಟಿಎಂ ಕೊಠಡಿಗಳನ್ನು ನಿರ್ಮಾಣ ಮಾಡಿ ಎಟಿಎಂ ಸೌಲಭ್ಯಗಳನ್ನು ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವದೆಂದು ತಿಳಿಸಿದರು.
ಕಳೆದ ವರ್ಷದಲ್ಲಿ ರೂ. 52.65 ಕೋಟಿ ಆದಾಯ ಗಳಿಸಿದ್ದು, ಪ್ರಸ್ತುತ ವರ್ಷದಲ್ಲಿ ರೂ. 52.67 ಕೋಟಿ ಆದಾಯ ಹೊಂದಿರುತ್ತದೆ. ಬ್ಯಾಂಕ್‌ನ ಸರ್ವ ಆಡಳಿತ ಮಂಡಳಿ ಸದಸ್ಯರುಗಳ ಮಾರ್ಗದರ್ಶನ ಹಾಗೂ ಸಿಬ್ಬಂದಿ ಪ್ರಾಮಾಣಿಕ ಸೇವೆಯಿಂದ ಮತ್ತು ಪರಿಶ್ರಮದಿಂದ ಅನುತ್ಪಾದಕ ಆಸ್ತಿ ವಸೂಲಾತಿಯಲ್ಲಿ ಹಾಗೂ ಸರ್ವತೋಮುಖ ಏಳೆಗಾಗಿ ಸೇವೆ ಸಲ್ಲಿಸಿರುವುದರ ಹಾಗೂ ಸದಸ್ಯರ ಕಾಳಜಿ ಪೂರ್ವಕ ಸಹಕಾರದ ಫಲವಾಗಿ ಬ್ಯಾಂಕು ಒಟ್ಟು ಲಾಭ ರೂ. 5.55 ಕೋಟಿ ಆಗಿದ್ದು, ಇದರಲ್ಲಿ ಆದಾಯಕರಗೆ ರೂ. 1.94 ಕೋಟಿ, ಅನುತ್ಪಾದಕ ಆಸ್ತಿಗೆ ರೂ. 45 ಲಕ್ಷ ಹಾಗೂ ಉತ್ಪಾದಕ ಆಸ್ತಿಗೆ 30 ಸಾವಿರಗಳನ್ನು ಅನುವು ಕಲ್ಪಿಸಿ ಉಳಿದ ರೂ. 3.14 ಕೋಟಿ ನಿವ್ವಳ ಲಾಭಹೊಂದುವಲ್ಲಿ ಸಫಲವಾಗಿದೆ ಎಂದರು.
ಪ್ರಸ್ತುತ ವರ್ಷದಲ್ಲಿ ಸಿದ್ಧೇಶ್ವರ ಬ್ಯಾಂಕ್ 52.67 ಕೋಟಿ ಆದಾಯ ಹೊಂದಿದ್ದು, 2.98 ಕೋಟಿ ರೂ. ನಿವ್ವಳ ಲಾಭದಲ್ಲಿದೆ ಎಂದು ವಿಜಯಕುಮಾರ ಇಜೇರಿ ಹೇಳಿದರು. ವ್ಯವಸ್ಥಾಪಕ ನಿರ್ದೇಶಕ ಜಗದೀಶ ಬಿ. ಕಲ್ಯಾಣಶೆಟ್ಟಿ ಪ್ರಗತಿ ವಿವರ ನೀಡಿದರು.
ಉಪಾಧ್ಯಕ್ಷೆ ಸೌಭಾಗ್ಯ ಭೋಗಶೆಟ್ಟಿ, ನಿರ್ದೇಶಕ ಶ್ರೀಹರ್ಷ ಎಸ್.ಪಾಟೀಲ್. ಗುರುಪಾದಯ್ಯ ( ಗುರು) ಎಸ್. ಗಚ್ಚಿನಮಠ, ಸುರೇಶ ಗಚ್ಚಿನಕಟ್ಟಿ, ವಿಶ್ವನಾಥ ಪಾಟೀಲ (ಮಸಿಬಿನಾಳ), ಈರಣ್ಣ ಎಂ.ಪಟ್ಟಣಶೆಟ್ಟಿ, ರಾಜೇಂದ್ರ ಎಂ. ಪಾಟೀಲ (ಉಪ್ಪಲದಿನ್ನಿ), ರಮೇಶ ಎಚ್. ಬಿದನೂರ, ರವೀಂದ್ರ ಎಸ್. ಬಿಜ್ಜರಗಿ, ವೈಜನಾಥ ಬಿ. ಕರ್ಪೂರಮಠ, ಡಾ. ಸಂಜೀವ ಪಾಟೀಲ, ವಿಜಯ ಎಸ್. ಜತ್ತಿ, ಕರುಣಾ ಔರಂಗಬಾದ, ಬೋರಮ್ಮ ಗೊಬ್ಬರ, ಪ್ರಕಾಶ ಎಸ್. ಬಗಲಿ, ಗುರುರಾಜ ಎಸ್. ಗಂಗನಳ್ಳಿ, ಸಾಯಬಣ್ಣ ಎಸ್. ಭೋವಿ, ಅಮೋಘಸಿದ್ದ ಎಂ. ನಾಯ್ಕೋಡಿ , ಸಂಗನಗೌಡ ಎಸ್. ಪಾಟೀಲ, ಮಂಜುನಾಥ ಸಿ. ಗುಂದಗಿ, ಎಸ್.ಕೆ. ಲೋಣಿ ಮತ್ತಿತರರಿದ್ದರು.
ಬಿ.ಕೆ. ಪಾಟೀಲ ನಿರೂಪಿಸಿದರು. ಶ್ರೀಶೈಲಗೌಡ ಪಾಟೀಲ ವಂದಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ, ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.