ಡಾ.ವಿಜಯ ಸಂಕೇಶ್ವರ ಅವರಿಗೆ ಸಿದ್ಧಶ್ರೀ ರಾಷ್ಟ್ರೀಯ ಪ್ರಶಸ್ತಿ

dr vijaya sankeshwara
Published on

ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲೂಕಿನ ಪುಣ್ಯೇತ್ರ ಸಿದ್ಧನಕೊಳ್ಳದಲ್ಲಿ ಜ. 14, 15 ಹಾಗೂ 16 ರಂದು ಸಿದ್ಧಶ್ರೀ ರಾಷ್ಟ್ರೀಯ ಉತ್ಸವ ಹಾಗೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಹಮ್ಮಿಕೊಳ್ಳಲಾಗಿದ್ದು, ಪ್ರತಿದಿನ ಸಂಜೆ 5 ಗಂಟೆಗೆ ಕಾರ್ಯಕ್ರಮ ನಡೆಯಲಿದೆ ಎಂದು ಸಿದ್ದನಕೊಳ್ಳದ ಡಾ. ಶಿವಕುಮಾರ ಮಹಾಸ್ವಾಮೀಜಿ ಹೇಳಿದರು.

ಉತ್ಸವ ನಿಮಿತ್ಯ ರಥೋತ್ಸವ ಹಾಗೂ ವಿಆರ್​ಎಲ್​ ಸಮೂಹ ಸಂಸ್ಥೆಗಳ ಚೇರ್ಮನ್​ ಡಾ. ವಿಜಯ ಸಂಕೇಶ್ವರ ಅವರಿಗೆ 2023ನೇ ಸಾಲಿನ "ಸಿದ್ಧಶ್ರೀ' ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗುವದು. ನಟಿಯರಾದ ಪ್ರೇಮಾ, ಪ್ರಿಯಾಂಕಾ ಉಪೇಂದ್ರ, ನಿರ್ದೇಶಕ ವಿಕ್ಟರಿ ವಾಸು ಸೇರಿ ಚಿತ್ರರಂಗದ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜ.14 ರಂದು ನಡೆಯುವ ಕಾರ್ಯಕ್ರಮದಲ್ಲಿ ಗುಳೇದಗುಡ್ಡದ ಮರಡಿಮಠದ ಅಭಿನವ ಕಾಡಸಿದ್ಧೇಶ್ವರ ಸ್ವಾಮೀಜಿ, ಮುರನಾಳದ ಮಳೆಯಪ್ಪಜ್ಜನವರು, ಹೆಬ್ಬಳ್ಳಿ ಅಜ್ಜನವರು ಸಾನಿಧ್ಯ ವಹಿಸಲಿದ್ದಾರೆ. ಶಾಸಕ ದೊಡ್ಡನಗೌಡ ಪಾಟೀಲ ಅಧ್ಯಕ್ಷತೆ ವಹಿಸಲಿದ್ದು, ರಾಷ್ಟ್ರೀಯ ಕಿಸಾನ ಸಮಿತಿ ನಿರ್ದೇಶಕ ಡಾ. ಆರ್​.ಎಸ್​. ರಾಜು ಉದ್ಘಾಟಿಸಲಿದ್ದಾರೆ ಎಂದರು.

ಜ.15 ರಂದು ಸಂಜೆ 5 ಗಂಟೆಗೆ ಏರ್ಪಡಿಸಿರುವ ಸಮಾರಂಭದಲ್ಲಿ ಡಾ. ವಿಜಯ ಸಂಕೇಶ್ವರ ಅವರಿಗೆ ಸಿದ್ಧಶ್ರೀ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಮಾಜಿ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಚಿತ್ತರಗಿ ಗುರುಮಹಾಂತ ಶ್ರೀಗಳು, ಅಂಕಲಗಿಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಶಾಸಕ ದೊಡ್ಡನಗೌಡ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ವಿವಿಧ ನಾಯಕರುಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಜ.16 ರಂದು ನಡೆಯವ ಕಾರ್ಯಕ್ರಮವನ್ನು ಶಾಸಕ ಡಾ. ವೀರಣ್ಣ ಚರಂತಿಮಠ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ಮಾಜಿ ಸಚಿವ ಎಚ್​.ವೈ. ಮೇಟಿ ಉದ್ಘಾಟಿಸಲಿದ್ದಾರೆ. ಶಿವಗಂಗೆಯ ಮಲಯ ಶಾಂತ ಮುನಿ ಶಿವಾಚಾರ್ಯರು, ಗುಡದೂರದ ನೀಲಕಂಠಚಾರ್ಯ ತಾತನವರು, ಧರ್ಮರ ಅಜ್ಜನವರು ಸಾನಿಧ್ಯ ವಹಿಸಲಿದ್ದು, ವಿವಿಧ ಗಣ್ಯರು ಆಗಮಿಸಲಿದ್ದಾರೆ ಎಂದರು. ಮೂರು ದಿನಗಳ ಕಾರ್ಯಕ್ರಮದಲ್ಲಿ ಹುಲಿಕಲ್​ ನಟರಾಜ ಅವರಿಂದ ಪವಾಡ ಬಯಲು, ಕಲಾವತಿ ದಯಾನಂದ ಅವರಿಂದ ಸಂಗೀತ, ವಿವಿಧ ಗಣ್ಯರಿಗೆ ಸನ್ಮಾನ, ಹೆಲಿಕಾಪ್ಟರ್​ ಮೂಲಕ ರಥೋತ್ಸವಕ್ಕೆ ಪುಷ್ಪಾರ್ಚನೆ ಸೇರಿ ಧಾರ್ಮಿಕ, ಸಾಮಾಜಿಕ, ಸಾಹಿತ್ಯ, ಸಾಂಸತಿ, ಕಲೆ ಪ್ರೋತ್ಸಾಹ ಚಟುವಟಿಕೆಗಳು ವಿಜೃಂಭಣೆಯಿಂದ ಜರುಗಲಿವೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net