

ಹುಬ್ಬಳ್ಳಿ: ಓಂ ನಮಃ ಶಿವಾಯ, ಹರ್ ಹರ್ ಮಹಾದೇವ್, ಸಿದ್ಧಾರೂಢ ಸದ್ಗುರು ತಂದೆ ಉದ್ಧಾರಾದೆವೋ ನಿನ್ನಿಂದ…, ಸಿದ್ಧಾರೂಢರ ಅಂಗಾರ ದೇಶಕ್ಕೆಲ್ಲ ಬಂಗಾರ…
ಇಲ್ಲಿಯ ಪ್ರಸಿದ್ಧ ಶ್ರೀ ಸಿದ್ಧಾರೂಢಸ್ವಾಮಿ ಮಠದ ಆವರಣದಲ್ಲಿರುವ ಪುಷ್ಕರಣಿಯಲ್ಲಿ ಶ್ರಾವಣ ಮಾಸದ ಶ್ರೀ ಸಿದ್ಧಾರೂಢ ಸ್ವಾಮೀಜಿ 95ನೇ ಪುಣ್ಯಾರಾಧನೆ ಸಪ್ತಾಹ ಅಂಗವಾಗಿ ಮಂಗಳವಾರ ಸಂಜೆ ಏರ್ಪಡಿಸಿದ್ದ ಜಲರಥೋತ್ಸವ ಭಕ್ತರ ಭಜನೆ, ಜಯಘೋಷ, ಹರ್ಷೋದ್ಘಾರಗಳ ಮಧ್ಯೆ ಜರುಗಿತು.
ಮಠದಲ್ಲಿ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಂಜೆ ವಾದ್ಯಮೇಳದೊಂದಿಗೆ ಶ್ರೀಗಳ ಪಲ್ಲಕ್ಕಿ ಉತ್ಸವ ನಗರದಲ್ಲಿ ಸಂಚರಿಸಿ ಸರಿಯಾಗಿ 5.15ಕ್ಕೆ ಶ್ರೀಮಠದ ಕೆರೆಯ ಹೊಂಡದ ಬಳಿ ಬಂದಿತು.
ಕೆರೆಯಲ್ಲಿದ್ದ ರಥಕ್ಕೆ 5.30ಕ್ಕೆ ಮಹಾಪೂಜೆ ಸಲ್ಲಿಸಲಾಯಿತು. ನಂತರ ಜಲರಥೋತ್ಸವ ಆರಂಭವಾಯಿತು.
ಸಂಪೂರ್ಣ ಹೂವು, ವಿದ್ಯುತ್ ದೀಪಗಳಿಂದ ಅಲಂಕೃತವಾಗಿದ್ದ ರಥ ಮುಂದೆ ಸಾಗುತ್ತಿದ್ದಂತೆ ಭಕ್ತಸಾಗರದ ಜಯಘೋಷ ಮುಗಿಲು ಮುಟ್ಟಿತು. ಓಂ ನಮಃ ಶಿವಾಯ ಪಂಚಾಕ್ಷರಿ ಮಂತ್ರ ಮೊಳಗಿತು.
ಭಕ್ತರು ತಮ್ಮ ಇಷ್ಟಾರ್ಥ ಪೂರೈಸಲು ಶ್ರೀ ಸಿದ್ಧಾರೂಢರಿಗೆ ಪ್ರಾರ್ಥಿಸಿ ಬಾಳೆಹಣ್ಣು, ಉತ್ತತ್ತಿ, ಬೆಂಡು ಬೆತ್ತಾಸುಗಳನ್ನು ಎಸೆದು ಕೃತಾರ್ಥರಾದರು. ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾ ಮೊದಲಾದೆಡೆಯಿಂದ ಅಸಂಖ್ಯ ಭಕ್ತರು ಆಗಮಿಸಿದ್ದರು.
ನಿರಂತರ ಜಯಘೋಷದ ಮಧ್ಯೆ ರಥವು ಪುಷ್ಕರಣಿಯಲ್ಲಿ ಐದು ಸುತ್ತು ಹಾಕಿತು. ಭಕ್ತರು ಅದ್ದೂರಿ ತೆಪ್ಪೋತ್ಸವವನ್ನು ಕಣ್ತುಂಬಿಕೊಂಡರು.
ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮಿಟಿ ಚೇರ್ಮನ್ ಬಸವರಾಜ ಕಲ್ಯಾಣಶೆಟ್ಟರ್, ವೈಸ್ ಚೇರ್ಮನ್ ಮಂಜುನಾಥ ಮುನವಳ್ಳಿ, ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ, ಧರ್ಮದರ್ಶಿಗಳಾದ ರಮೇಶ ಬೆಳಗಾವಿ, ಗೋವಿಂದ ಮಣ್ಣೂರ, ಉದಯಕುಮಾರ ನಾಯ್ಕ, ಶಾಮಾನಂದ ಪೂಜೇರಿ, ಬಾಳು ಮಗಜಿಕೊಂಡಿ, ವಿ.ವಿ. ಮಲ್ಲಾಪುರ, ಚನ್ನವಿರ ಮುಂಗರವಾಡಿ, ಗೀತಾ ಕಲ್ಬುರ್ಗಿ, ಕೆ.ಎಲ್. ಪಾಟೀಲ, ವಿ.ಡಿ. ಕಾಮರಡ್ಡಿ, ಸಿದ್ದನಗೌಡ ಪಾಟೀಲ, ಮ್ಯಾನೇಜರ್ ಈರಣ್ಣ ತುಪ್ಪದ, ಇತರರು ಇದ್ದರು.