

ಹುಬ್ಬಳ್ಳಿ: ಶ್ರೀ ಸಿದ್ಧಾರೂಢರ ಜಾತ್ರಾ ಮಹೋತ್ಸವ ನಿಮಿತ್ತ ನಗರದ ಶ್ರೀ ಸಿದ್ಧಾರೂಢರ ಮಠದ ಆವರಣದಲ್ಲಿ ಶನಿವಾರ ಸಂಜೆ ವಿಜೃಂಭಣೆಯಿಂದ ರಥೋತ್ಸವ ಜರುಗಿತು.
ಬೆಳಗ್ಗೆಯಿಂದ ಶ್ರೀ ಸಿದ್ಧಾರೂಢ ಹಾಗೂ ಶ್ರೀ ಗುರುನಾಥರೂಢರ ಮೂರ್ತಿಗೆ ಅಭಿಷೇಕ, ಅಲಂಕಾರ, ನೈವೇದ್ಯ ಸಮರ್ಪಿಸಲಾಯಿತು. ಮಹಾರಾಷ್ಟ್ರ, ತಮಿಳುನಾಡು, ಗೋವಾ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಭಕ್ತರು, ಉಭಯ ಶ್ರೀಗಳ ದರ್ಶನ ಪಡೆದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು, ಉಭಯ ಶ್ರೀಗಳ ಕುರಿತು ಭಜನೆ ಮಾಡಿದರು. ಸಂಜೆ ವೇಳೆ ಪಲ್ಲಕ್ಕಿ ಉತ್ಸವ ಜರುಗಿತು. ನಂತರ ಭಕ್ತರ ಮಧ್ಯೆ ವಿಜೃಂಭಣೆಯಿಂದ ರಥವನ್ನು ಎಳೆಯಲಾಯಿತು.
ಶ್ರೀಮಠದ ಆಡಳಿತಾಧಿಕಾರಿ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಜಿ. ಶಾಂತಿ ಅವರು ರಥೋತ್ಸವಕ್ಕೆ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಸಚಿವ ಎಚ್.ಕೆ. ಪಾಟೀಲ, ಟ್ರಸ್ಟ್ ಮೇಲ್ಮನೆ ಸದಸ್ಯ ಡಿ.ಆರ್. ಪಾಟೀಲ, ವಿವಿಧ ಮಠಾಧೀಶರು ಇತರರು ಇದ್ದರು.
ನಂತರ ‘ಶ್ರೀ ಸಿದ್ಧಾರೂಢ ಮಹಾರಾಜ್‌ಕೀ ಜೈ’ ಎನ್ನುವ ಭಕ್ತರ ಘೋಷಣೆ ಎಲ್ಲೆಡೆ ಮೊಳಗಿತು. ‘ಸಿದ್ಧಾರೂಢರ ಅಂಗಾರ, ದೇಶಕ್ಕೆಲ್ಲ ಬಂಗಾರ’ ಎನ್ನುವ ಹಾಡುಗಳನ್ನು ಭಕ್ತರು ಹಾಡಿದರು. ರಥಕ್ಕೆ ಉತ್ತತ್ತಿ ಎಸೆದು ಕೃತಾರ್ಥರಾದರು.
ದೂರದ ಊರುಗಳಿಂದ ಆಗಮಿಸಿದ್ದ ಭಕ್ತರು, ಉಭಯ ಶ್ರೀಗಳಿಗೆ ಹಣ್ಣು-ಹಂಪಲು, ನೈವೇದ್ಯ ಅರ್ಪಿಸಿದರು. ಕೆಲವರು ಭಜನೆ ಮಾಡುತ್ತ ಶ್ರಿಗಳನ್ನು ಸ್ಮರಿಸಿದರು. ಭಕ್ತರಿಗಾಗಿ ಶ್ರೀಮಠದಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಪೊಲೀಸರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.