

ಹುಬ್ಬಳ್ಳಿ: ಗೋವಾ ರಾಜ್ಯದ ಪ್ರೂಡೆಂಟ್ ಮೀಡಿಯಾ ನೆಟ್ವರ್ಕ ವತಿಯಿಂದ ನಿಮಿರ್ಸಿದ "ಓಂ ಸಿದ್ಧಾರೂಢಾಯ ನಮಃ' ಸಾಕ್ಷ್ಯಚಿತ್ರವನ್ನು ಗೋವಾದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅಲ್ಲಿನ ರಾಜ್ಯಪಾಲ ಪಿ.ಎಸ್. ಶ್ರೀಧರನ್ ಪಿಳೈ ಹಾಗೂ ನಗರದ ಶಾಸಕ ಮಹೇಶ ಟೆಂಗಿನಕಾಯಿ ಬಿಡುಗಡೆ ಮಾಡಿದರು.
ನಂತರ ನಡೆದ ಸಭೆಯಲ್ಲಿ ಮಾತನಾಡಿದ ಶಾಸಕರು, ಕೇಂದ್ರ ಸರ್ಕಾರವು ಸಿದ್ಧಾರೂಢ ಸ್ವಾಮೀಜಿ ಅವರ ಕುರಿತ ಪೋಸ್ಟಲ್ ಸ್ಟಾಂಪ್ ಬಿಡುಗಡೆ ಮಾಡಿದೆ. ಜಗತ್ತಿನ ಅತ್ಯಂತ ಉದ್ದವಾದ ರೈಲ್ವೆ ಪ್ಲಾಟ್ ಫಾರ್ಮ ಹೊಂದಿದ ಹುಬ್ಬಳ್ಳಿ ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢ ಸ್ವಾಮೀಜಿ ನಾಮಕರಣ ಮಾಡಲಾಗಿದೆ ಎಂದರು.
ಪ್ರೂಡೆಂಟ್ ನೆಟ್ವರ್ಕ್ ಮೀಡಿಯಾದವರು ಸ್ವಾಮೀಜಿ ಕುರಿತು ಧಾರವಾಹಿ ಮಾಡಿದರೆ ಸ್ವಾಮೀಜಿ ಅವರ ವಿಚಾರಗಳು ಮನೆ ಮನೆಗೂ ತಲುಪಲು ಸಹಾಯವಾಗುತ್ತದೆ ಎಂದು ಮನವಿ ಮಾಡಿದರು.
ಸಿದ್ಧಾರೂಢ ಮಠದಲ್ಲಿ ಸಾಕಷ್ಟು ಸ್ಥಳವಿದ್ದು, ಗೋವಾ ರಾಜ್ಯದ ಭಕ್ತರು ವಸತಿ ನಿಲಯ ಕಟ್ಟಿಕೊಳ್ಳಬಹುದು, ಈ ಬಗ್ಗೆ ಟ್ರಸ್ಟ್ ಅಧ್ಯಕ್ಷರೊಂದಿಗೆ ಚರ್ಚಿಸಿದ್ದೇನೆ ಎಂದು ಶಾಸಕರು ತಿಳಿಸಿದರು.
ಶ್ರೀ ಗಣೇಶಾನಂದ ಸ್ವಾಮೀಜಿ, ಕೇಂದ್ರದ ವಿದ್ಯುತ್, ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಶ್ರೀಪಾದ ನಾಯ್ಕ, ಗೋವಾ ರಾಜ್ಯದ ವಿದ್ಯುತ್ ಸಚಿವ ಸುದಿನ್ ಧವಲಿಕರ್, ಗೋವಾ ಸಮಾಜ ಕಲ್ಯಾಣ ಇಲಾಖೆ ಸಚಿವ ಸುಭಾಸ್ ಫಾಲ್ ದೇಸಾಯಿ.
ಮರ್ಮಗೋವಾ ಶಾಸಕ ಸಂಕಲ್ಪ ಅಮೋನ್ಕರ್, ಸಿದ್ಧಾರೂಢ ಸ್ವಾಮೀಜಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟರ್, ಗ್ರಿನ್ ಕರ್ನಾಟಕ ಅಸೋಸಿಯೇಷನ್ ಅಧ್ಯಕ್ಷ ಚೆನ್ನು ಹೊಸಮನಿ, ಉದ್ಯಮಿ ಡಾ. ವಿ.ಎಸ್.ವಿ. ಪ್ರಸಾದ ಇತರರು ಉಪಸ್ಥಿತರಿದ್ದರು.