

ಹುಬ್ಬಳ್ಳಿ : ಶ್ರೀ ಸಿದ್ಧಾರೂಢರ 94ನೇ ಪುಣ್ಯಾರಾಧನೆ ಅಂಗವಾಗಿ ಇಲ್ಲಿನ ಶ್ರೀ ಸಿದ್ಧಾರೂಢ ಮಠದಲ್ಲಿ ಆ. 26 ರಿಂದ ಸೆ.1 ರವರೆಗೆ ವಿವಿಧ ಧಾರ್ವಿುಕ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸೆ. 1ರಂದು ಸಂಜೆ 5.30ಕ್ಕೆ ಜಲರಥೋತ್ಸವ ಜರುಗಲಿದೆ.
ಶುಕ್ರವಾರದಂದು ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಸಿದ್ಧಾರೂಢ ಮಠ ಟ್ರಸ್ಟ್ ಕಮಿಟಿ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟರ, ಆ. 26ರಂದು ಪ್ರಾತಃಕಾಲ ಸಿದ್ಧಾರೂಢರ ಸಮಾಧಿಗೆ ರುದ್ರಾಭಿಷೇಕ ನೆರವೇರಿಸಿದ ಬಳಿಕ ಶಿವನಾಮ ಸಪ್ತಾಹದೊಂದಿಗೆ ಧಾರ್ವಿುಕ ಕಾರ್ಯಗಳು ಪ್ರಾರಂಭಗೊಳ್ಳಲಿವೆ ಎಂದು ಹೇಳಿದರು.
ಆ. 26 ರಿಂದ 31 ರವರೆಗೆ ನಿತ್ಯ ಬೆಳಗ್ಗೆ 7.45ಕ್ಕೆ ಕೈಲಾಸ ಮಂಟಪದಲ್ಲಿ ಶಿವಾನಂದ ಜೋಶಿ ಅವರಿಂದ ಸಿದ್ಧಾರೂಢರ ಪುರಾಣ ಪಠಣ ಹಾಗೂ ಬೆಳಗ್ಗೆ 9ರಿಂದ ಮಧ್ಯಾಹ್ನ 12 ಗಂಟೆವರೆಗೆ ವಿವಿಧ ಮಠಗಳ ಶ್ರೀಗಳಿಂದ ತತ್ಪೋಪದೇಶ, ಸಂಜೆ 5 ಗಂಟೆಗೆ ಕೀರ್ತನೆ ನಡೆಯಲಿದೆ ಎಂದರು.
ಸೆ. 1ರಂದು ಬೆಳಗ್ಗೆ 9 ಗಂಟೆಗೆ ಶ್ರೀ ಸಿದ್ಧಾರೂಢರ ಮಹಿಮೆ ಕುರಿತು ಉಪನ್ಯಾಸ ಆಯೋಜಿಸಲಾಗಿದೆ. ಅದೇ ದಿನ ಸಂಜೆ ಸಿದ್ಧಾರೂಢರ 94ನೇ ವರ್ಷದ ಪುಣ್ಯತಿಥಿ ಅಂಗವಾಗಿ ಅದ್ದೂರಿ ಪಲ್ಲಕ್ಕಿ ಉತ್ಸವ ನೆರವೇರಲಿದೆ. ಸಂಜೆ 5.30ಕ್ಕೆ ಜಲರಥೋತ್ಸವ (ತೆಪ್ಪದ ತೇರು) ಜರುಗಲಿದೆ. ಇದಕ್ಕೂ ಮುನ್ನ ಸಿದ್ಧಾರೂಢರ ಪಲ್ಲಕ್ಕಿ ಉತ್ಸವ ನಡೆಯಲಿದೆ. ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ಗೋವಾ ಹಾಗೂ ಇನ್ನಿತರ ಪ್ರದೇಶಗಳಿಂದ ಲಕ್ಷಾಂತರ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಐದು ದಿನಗಳ ಪುಣ್ಯಾರಾಧನೆಯಲ್ಲಿ ಇಂಚಲ ಶ್ರೀಗಳು, ಹೊಸದುರ್ಗ ಪುರುಷೋತ್ತಮಾನಂದಪುರಿ ಶ್ರೀಗಳು, ದಯಾನಂದ ಸರಸ್ವತಿ ಶ್ರೀಗಳು, ಚಿತ್ರದುರ್ಗ ಕಬೀರಾನಂದಾಶ್ರಮದ ಶ್ರೀಗಳು, ಘೊಡಗೇರಿ ಶ್ರೀಗಳು ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು.
ಟ್ರಸ್ಟ್ ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ, ಉಪಾಧ್ಯಕ್ಷ ಉದಯಕುಮಾರ ನಾಯ್ಕ, ಧರ್ಮದರ್ಶಿಗಳಾದ ರಮೇಶ ಬೆಳಗಾವಿ, ವಿನಾಯಕ ಘೊಡ್ಕೆ, ಗೀತಾ ಕಲಬುರ್ಗಿ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.
.......ಬಾಕ್ಸಘಿ.ಘಿ.ಘಿ.
ಸೆ.15ರ ವರೆಗೆ ಕೋಟಿ ಜಪಯಜ್ಞ:
ಮಠದಲ್ಲಿ ಆರಂಭವಾಗಿರುವ ಕೋಟಿ ಜಪಯಜ್ಞ ಕಾರ್ಯಕ್ರಮಕ್ಕೆ ಭಕ್ತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆ.15ರಿಂದ ಇಲ್ಲಿಯವರೆಗೆ 1200ಕ್ಕೂ ಅಧಿಕ ಭಕ್ತರು ಜಪಯಜ್ಞದಲ್ಲಿ ಪಾಲ್ಗೊಂಡಿದ್ದಾರೆ. 7ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಆ. 29ರಿಂದ 31ರ ವರೆಗೆ ಬೆಳಗ್ಗೆ 8ರಿಂದ 10 ಹಾಗೂ ಮಧ್ಯಾಹ್ನ 2ರಿಂದ 4ರ ವರೆಗೆ ಕೋಟಿ ಜಪಯಜ್ಞ ನಡೆಯಲಿದೆ ಎಂದು ಕಲ್ಯಾಣಶೆಟ್ಟರ ತಿಳಿಸಿದರು.