ಸಿದ್ದರಾಮೋತ್ಸವ ವ್ಯಕ್ತಿಯ ಪೂಜೆಯಲ್ಲ, ಹೂವಿನಹಡಗಲಿ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಸ್ಪಷ್ಟನೆ

Hadagali ExMLA Nandihalli Halappa
ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ
Published on

ಹೂವಿನಹಡಗಲಿ: ದಾವಣಗೆರೆಯಲ್ಲಿ ನಡೆಯುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಜನ್ಮ ದಿನಾಚರಣೆ ಕಾರ್ಯಕ್ರಮವು ವ್ಯಕ್ತಿ ಪೂಜೆಯಲ್ಲ. ಬದಲಾಗಿ ನಾಡಿನ ಜನತೆಯ ಶಕ್ತಿ ಪ್ರದರ್ಶನವಾಗಿದೆ ಎಂದು ಹೂವಿನಹಡಗಲಿ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಹೇಳಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಆಡಳಿತ ಅವಧಿಯಲ್ಲಿ ಬಡವರಿಗೆ ಅನೇಕ ಜನಪರ ಭಾಗ್ಯಗಳನ್ನು ನೀಡುವುದರ ಜತೆಗೆ ಬಸವಣ್ಣ, ಅಂಬೇಡ್ಕರ್, ಟಿಪ್ಪು ಸುಲ್ತಾನ್, ಮಾಜಿ ಸಿಎಂ ದೇವರಾಜ ಅರಸು, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಅಪ್ಪಟ ಅನುಯಾಯಿಯಾಗಿ ಆಡಳಿತ ನಡೆಸಿದ್ದಾರೆ. ಇಂತಹವರ ಜನ್ಮದಿನದ ಅಮೃತ ಮಹೋತ್ಸವ ಮಾಡುತ್ತಿರುವುದು ನಾಡಿನ ಜನತೆಯ ಶಕ್ತಿ ಪ್ರದರ್ಶನವಾಗಿದೆ ಎಂದು ಬುಧವಾರ ತಿಳಿಸಿದರು.

ಪ್ರಸ್ತುತ ಚುನಾವಣೆ ವರ್ಷವಾಗಿರುವುದರಿಂದಾಗಿ ಬೇರೆ ಬೇರೆಯವರು ಅವರವರ ಭಾವನೆಗಳಿಗೆ ತಕ್ಕಂತೆ ಯಾವುದೋ ಬಣ್ಣ ಕಟ್ಟಬಹುದು. ಆದರೆ, ಅವೆಲ್ಲವೂ ಕಾಂಗ್ರೆಸ್‌ಗೆ ಮತ್ತಷ್ಟು ಬಲ ತುಂಬಲಿವೆ. ಕೇವಲ 2-3 ವರ್ಷಗಳ ಅವಧಿಯಲ್ಲೇ ರಾಜ್ಯದಲ್ಲಿ ನಡೆದ ಬಿಜೆಪಿ ದುರಾಡಳಿತವನ್ನು ಜನತೆಗೆ ತಿಳಿ ಹೇಳಲು ಮಧ್ಯ ಕರ್ನಾಟಕ ಭಾಗವಾದ ದಾವಣಗೆರೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆ.3 ರಂದು ನಡೆಯುವ ಸಿದ್ದರಾಮಯ್ಯರ ಅಮೃತ ಮಹೋತ್ಸವಕ್ಕೆ ಹೂವಿನಹಡಗಲಿ ಕ್ಷೇತ್ರದಿಂದ ಪಕ್ಷದ ಮುಖಂಡರುಗಳು, ಕಾರ್ಯಕರ್ತರು ಅಭಿಮಾನಿಗಳು ಸ್ವಯಂ ಪ್ರೇರಿತರಾಗಿ ಹಾಜರಾಗಲಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net