

ಮೈಸೂರು: ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿಯನ್ನು ಫೆಬ್ರವರಿ 12ರಂದು ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಆರ್. ಲೋಕನಾಥ್ ತಿಳಿಸಿದರು.
ಜಯಂತಿ ಆಚರಣೆ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಸರ್ಕಾರದ ಶಿಷ್ಟಾಚಾರದಂತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಜಿಲ್ಲೆಗೆ ಕಾರ್ಯಕ್ರಮ ಮಾಡಲು 50 ಸಾವಿರ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಈ ಸಂಬಂಧ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಮಾಡಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಜಯಂತಿ ಕಾರ್ಯಕ್ರಮ ನಡೆಯುವ ಸ್ಥಳದ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ, ಶಾಮಿಯಾನ ವ್ಯವಸ್ಥೆ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕಲಾತಂಡಗಳಿಂದ ಪ್ರದರ್ಶನ ಏರ್ಪಡಿಸಲಾಗುವುದು. ಆಹ್ವಾನ ಪತ್ರಿಕೆಯ ಮುದ್ರಣ ಮಾಡಿ ಸರ್ಕಾರದ ಶಿಷ್ಟಾಚಾರದಂತೆ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗುವುದು. ಈ ಸಂಬಂಧ ಸಮಿತಿಯವರು ಸಹಕರಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಸೀತಾರಾಂ, ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಭೋವಿ ಸಮುದಾಯದ ಅಧ್ಯಕ್ಷ ಜಿ.ನಾಗರಾಜ್, ಉಪಾಧ್ಯಕ್ಷ ಚಿನ್ನಸ್ವಾಮಿ ಮತ್ತಿತರರಿದ್ದರು.