

ಶಿವಮೊಗ್ಗ: ಭದ್ರಾವತಿ ತಾಲೂಕಿನ ಸಿದ್ಧಾಪುರ ಗ್ರಾಮದಲ್ಲಿ ಪರವಾನಗಿ ಇಲ್ಲದೆ ಕೆರೆಯಲ್ಲಿ ಯಂತ್ರಗಳ ಬಳಸಿ ಮಣ್ಣು ತೆಗೆದು ಬರೋಬ್ಬರಿ 28 ಲಕ್ಷ ರೂ. ಸರ್ಕಾರಕ್ಕೆ ನಷ್ಟವನ್ನುಂಟು ಮಾಡಿರುವ ಗುತ್ತಿಗೆದಾರನ ಮೇಲೆ ಪ್ರಕರಣ ದಾಖಲಿಸಿರುವ ಕಂದಾಯ ಇಲಾಖೆ ಅಧಿಕಾರಿಗಳು, ಹಿಟಾಚಿ ಸೇರಿದಂತೆ 90 ಲಕ್ಷ ರೂ. ಮೌಲ್ಯದ ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ಭದ್ರಾವತಿಯ ಮುಸ್ಲಿಂ ಕೂಲಿ ಬ್ಲಾಕ್‌ನ ನಿವಾಸಿ ನಾಸಿರ್ ಅಹಮ್ಮದ್ ಮೇಲೆ ಕಂದಾಯ ಇಲಾಖೆ ಅಧಿಕಾರಿ ಕೆ.ಸತೀಶ್ ಅವರು ಭದ್ರಾವತಿ ಟೌನ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮೀನುಗಾರಿಕೆ ಇಲಾಖೆಯಿಂದ ಮೀನು ಸಾಕಣೆಗೆ ಅನುಮತಿ ಪಡೆದಿದ್ದು ಇಲಾಖೆಯ ಗಮನಕ್ಕೆ ತಾರದೇ ಕೆರೆ ನೀರು ಖಾಲಿ ಮಾಡಿ ಕಳೆದೆರಡು ವರ್ಷಗಳಿಂದ ಹಿಟಾಚಿ ಯಂತ್ರ ಬಳಸಿ 15ರಿಂದ 20 ಅಡಿಯಷ್ಟು ಮಣ್ಣು ತೆಗೆದು ಮಾರಾಟ ಮಾಡಲಾಗಿದೆ.
ಖಚಿತ ಮಾಹಿತಿ ಮೇರೆಗೆ ತಹಸೀಲ್ದಾರ್ ಆರ್.ಪ್ರದೀಪ್, ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಕೆ.ಸತೀಶ್ ಹಾಗೂ ಗ್ರಾಮ ಲೆಕ್ಕಿಗರನ್ನೊಳಗೊಂಡ ತಂಡವು ದಾಳಿ ನಡೆಸಿ ಪರಿಶೀಲಿಸಿದಾಗ ಅಕ್ರಮವಾಗಿ ಕೆರೆ ಮಣ್ಣನ್ನು ಸಾಗಿಸಿರುವುದು ದೃಢಪಟ್ಟಿದೆ. ಅಲ್ಲದೆ, ಕೆರೆ ನೀರು ಖಾಲಿ ಮಾಡಲು ಹಿಟಾಚಿಯಿಂದ ಕೋಡಿ ಒಡೆದು ಮಣ್ಣು ತೆಗೆದಿರುವುದು ಕಂಡುಬಂದಿದೆ. ಹಾಗಾಗಿ ಒಂದು ಹಿಟಾಚಿ, ಆರು ಲಾರಿ, ಒಂದು ಟ್ಯಾಕ್ಟರ್‌ನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಅಲ್ಲದೆ, ಸರ್ಕಾರಕ್ಕೆ 28 ಲಕ್ಷ ರೂ. ನಷ್ಟ ಮಾಡಿರುವ ಬಗ್ಗೆ ಗುತ್ತಿಗೆದಾರ ನಾಸಿರ್ ಅಹಮ್ಮದ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.