

ಶಿವಮೊಗ್ಗ: ಸಂಸ್ಕಾರ ಮತ್ತು ಸಂಸ್ಕೃತಿಯಿಂದ ಮನುಷ್ಯನಲ್ಲಿ ಸನ್ನಡತೆ ಮೂಡುತ್ತದೆ. ಈ ಸನ್ನಡತೆಯೇ ವ್ಯಕ್ತಿಯ ವ್ಯಕ್ತಿತ್ವದ ಮಾನದಂಡ. ಧರ್ಮ, ಸಂಸ್ಕೃತಿ-ಸಂಸ್ಕಾರ, ಆಚಾರ-ವಿಚಾರಗಳು ಮನುಷ್ಯನ ವ್ಯಕ್ತಿತ್ವವನ್ನು ಉನ್ನತೀಕರಿಸುತ್ತವೆ. ತಂದೆ-ತಾಯಿ ಮಕ್ಕಳಿಗೆ ಸಂಸ್ಕೃತಿ ಮತ್ತು ಸಂಸ್ಕಾರ ಕಲಿಸಿದಲ್ಲಿ ಸುಸಂಸ್ಕೃತ ಪ್ರಜೆಯನ್ನು ರೂಪಿಸಲು ಸಾಧ್ಯ ಎಂದು ಗೋಣಿಬೀಡು ಶ್ರೀ ಶೀಲ ಸಂಪಾದನಾ ಮಠದ ಪೀಠಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಗೋಣಿಬೀಡಿನ ಶ್ರೀ ಶೀಲ ಸಂಪಾದನಾ ಮಠದಲ್ಲಿ ಭಾನುವಾರ ಸಂಜೆ ಶ್ರೀ ಶೀಲ ಸಂಪಾದನಾ ಮಠ ಸ್ಪಿರಿಚ್ಯುಯಲ್ ಫೌಂಡೇಷನ್‌ನಿಂದ ಸಹಸ್ತ್ರ ಜ್ಯೋತಿಗಳ ದೀಪೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮಕ್ಕಳಿಗೆ ಶಿಕ್ಷಣ ನೀಡುವುದು ಸುಲಭ. ಆದರೆ ಸಂಸ್ಕಾರ ನೀಡುವುದು ಕಷ್ಟ. ಪಾಲಕರು ನಡೆದ ದಾರಿಯಲ್ಲಿ ಮಕ್ಕಳು ನಡೆಯುತ್ತಾರೆ. ಆದ್ದರಿಂದ ಪಾಲಕರ ನಡೆ-ನುಡಿ, ಸಂಸ್ಕೃತಿ, ಸಂಸ್ಕಾರ ಆದರ್ಶ ಪ್ರಾಯವಾಗಿದ್ದರೆ ಮಕ್ಕಳೂ ಸಹ ಅದನ್ನು ಅನುಸರಿಸುತ್ತಾರೆ. ಕೆಲವು ರೋಗಗಳು ಅನುವಂಶೀಯವಾಗಿ ಬರುತ್ತವೆ. ಅಂತೆಯೇ ಸಂಸ್ಕಾರ ಸಹ ಸೂಕ್ಷ್ಮವಾಗಿ ಅನುವಂಶೀಯತೆಯೊಂದಿಗೆ ಹಾಸುಹೊಕ್ಕಾಗಿರುತ್ತದೆ ಎಂದರು.
ತಂದೆ-ತಾಯಿಗೆ ಮಕ್ಕಳು ಕೇಳಿದ್ದನ್ನು ಕೊಡಿಸುವ ಸಾಮರ್ಥ್ಯವಿರಬಹುದು. ಆದರೆ ಹೆಚ್ಚೆಚ್ಚು ಸೌಕರ್ಯಗಳನ್ನು ಒದಗಿಸಿದಾಗಲೂ ಅವರನ್ನು ಹೆಚ್ಚು ದುರ್ಬಲರನ್ನಾಗಿ ಮಾಡುತ್ತಿದ್ದೀರೆಂಬುದನ್ನು ನೀವು ಮರೆಯಬಾರದು ಎಂದು ಎಚ್ಚರಿಸಿದರು.
ಮಕ್ಕಳೆಂಬ ಪ್ರೀತಿ, ಮಮಕಾರದಿಂದ ಪಾಲಕರು ಅವರ ಬೇಡಿಕೆಗಳನ್ನು ಪೂರೈಸಬಹುದು. ಆದರೆ ಅವರು ದೊಡ್ದವರಾದಾಗ ಕಷ್ಟಗಳೂ ಎದುರಾಗಬಹುದು. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲೂ ಸುಖ-ದುಃಖಗಳೆಂಬುದು ಬಂದು ಹೋಗುವಂತಹ ಸಾಮಾನ್ಯ ಸಂಗತಿಗಳು. ಇದನ್ನು ಎದುರಿಸಲು ಮನೋಸ್ಥೈರ್ಯ ಅಗತ್ಯ. ಇದನ್ನು ಮಕ್ಕಳಿಗೆ ಕಲಿಸಿ ಕೊಡಬೇಕು ಎಂದು ಸಲಹೆ ನೀಡಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ, ಶ್ರೀಮಠದ ಪೋಷಕ ಎಂ. ಶ್ರೀಕಾಂತ್ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕ ಬಿ.ಕೆ.ಸಂಗಮೇಶ್ವರ್, ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಮುಖಂಡರಾದ ಎಸ್.ದಯಾಶಂಕರ್, ಪಿ.ಓ.ಶಿವಕುಮಾರ್, ಶಿವಯೋಗಾಶ್ರಮದ ಆಡಳಿತಾಧಿಕಾರಿ ಜಿ.ಎ.ಹಿರೇಮಠ, ಚನ್ನಪ್ಪಾಜಿ ಎಕ್ಲಾಸ್‌ಪುರ ಉಪಸ್ಥಿತರಿದ್ದರು.