ಸಿದ್ಧ ವೈದ್ಯ ಸಾಹಿತ್ಯ ಎಲ್ಲ ಭಾಷೆಯಲ್ಲೂ ರಚನೆಯಾಗಲಿ: ಶಾಸಕ ಟಿ.ಎಸ್.ಶ್ರೀವತ್ಸ ಹೇಳಿಕೆ

12
Published on

ಮೈಸೂರು: ಪ್ರಾಚೀನ ಲಿಪಿಯಲ್ಲಿರುವ ಸಿದ್ಧ ವೈದ್ಯ ಸಾಹಿತ್ಯವನ್ನು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವಂತೆ ಎಲ್ಲ ಭಾಷೆಯಲ್ಲಿ ರಚಿಸಿದರೆ ಅನುಕೂಲವಾಗುತ್ತದೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಅಭಿಪ್ರಾಯಪಟ್ಟರು.
ಅಗಸ್ತ್ಯ ಸಿದ್ಧ ಸಾಹಿತ್ಯ ಸಂಶೋಧನಾ ಕೇಂದ್ರ ಮೈಸೂರು, ಜಿಸಿಎಸ್‌ಎಂಆರ್ ಚೆನ್ನೈ, ಯುಎಸ್‌ಐ ಪ್ರಕಾಶನದಿಂದ ನಗರದ ಗೋಪಾಲಸ್ವಾಮಿ ಶಿಶುವಿಹಾರ ಸಂಸ್ಥೆಯ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿದ್ಧ ವೈದ್ಯ ಪಿ.ಎಸ್.ನರಸಿಂಹಸ್ವಾಮಿ ರಚಿಸಿರುವ ‘ಅಗಸ್ತ್ಯ ಸಿದ್ಧ ವೈದ್ಯ ಪದ್ಧತಿ’ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಸಿದ್ಧ ವೈದ್ಯ ಸಾಹಿತ್ಯವು ಸಂಪೂರ್ಣವಾಗಿ ಪ್ರಾಚೀನ ತಮಿಳು ಲಿಪಿಗಳಲ್ಲಿರುವುದು ಹಾಗೂ ಪದ್ಯ ರೂಪದಲ್ಲಿ ಬಿಡಿಸಲಾಗದ ಒಗಟಿನಂತಿದೆ. ಹಾಗಾಗಿ ಸಿದ್ಧ ವೈದ್ಯ ಪದ್ಧತಿ ಕುರಿತು ತಿಳಿದುಕೊಳ್ಳುವ ಅವಕಾಶದಿಂದ ಬಹುತೇಕ ಜನರು ವಂಚಿತರಾಗುತ್ತಿದ್ದಾರೆ ಎಂದರು.
ದೇಶದಲ್ಲಿರುವ ಅನ್ಯಭಾಷಿಕರು ಮತ್ತು ಹೊರ ದೇಶಗಳ ಆಸಕ್ತರು, ಸಿದ್ಧ ವೈದ್ಯದ ಬಗ್ಗೆ ತಿಳಿದುಕೊಳ್ಳಲು ಅನುಕೂಲವಾಗುವಂತೆ, ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತೆ ಕೃತಿ ಅನುವಾದಿಸಿ ರಚಿಸಬೇಕಿದೆ. ಕಲಿಯಲು ಯಾವ ವಯಸ್ಸಿನ ಅಂತರವಿಲ್ಲ ಎನ್ನುವುದನ್ನು ಕೃತಿ ರಚಿಸಿರುವ ನರಸಿಂಹಸ್ವಾಮಿ ಅವರನ್ನು ನೋಡಿ ತಿಳಿಯಬೇಕು. ಒಂದು ಕಲೆಯನ್ನು ಸಿದ್ಧಿಸಿಕೊಂಡು ಕೃತಿ ರಚಿಸುವ ಮೂಲಕ ಜನರ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚುತ್ತಿದೆ. ಹಾಗಾಗಿ ಮುಂದಿನ ದಿನದಲ್ಲಿ ಈ ಗ್ರಂಥವು ಸಾರ್ವಜನಿಕ ಗ್ರಂಥಾಲಯಲ್ಲಿ ಎಲ್ಲರಿಗೂ ಸಿಗುವಂತಹ ವ್ಯವಸ್ಥೆ ಆಗಬೇಕು. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಯೋಗ ನಗರಿಯಾಗಿರುವ ಮೈಸೂರಿನಲ್ಲಿ ಆಯುರ್ವೇದ ಔಷಧದ ವಿಷಯದ ಬಗ್ಗೆ ಎಲ್ಲರಿಗೂ ತಿಳಿಸುವಂತಹ ಕೆಲಸ ಮಾಡಲಾಗುತ್ತಿದ್ದು, ಇದರ ಜತೆಗೆ ಪ್ರತಿದಿನ ನಮ್ಮ ದೇಹವನ್ನು ಆರೋಗ್ಯವಾಗಿ ಇಡುವುದಕ್ಕೆ ಯೋಗ ಮಾಡಬೇಕಿದೆ ಎಂದು ಸಲಹೆ ನೀಡಿದರು.
ನಾಡಿ ಪರೀಕ್ಷೆ, ಅಷ್ಟ ಸ್ಥಾನ ಪರೀಕ್ಷೆ, ತ್ರಿದೋಷಗಳ ಗ್ರಹಿಕೆ, ರೋಗಿಯ ಮನಃಸ್ಥಿತಿ, ಅನುವಂಶೀಯ ಕಾಯಿಲೆಗಳ ತುಲನೆ ಇವೆಲ್ಲವೂ ಎರಡೂ ಪದ್ಧತಿಗಳಲ್ಲೂ ರೋಗ ನಿಧಾನ ಕ್ರಮಗಳು. ಕೆಲವೊಂದು ವಿಶಿಷ್ಟತೆಗಳು ಸಿದ್ಧ ವೈದ್ಯದಲ್ಲಿ ಮಾತ್ರ ಲಭ್ಯ. ಉದಾಹರಣೆಗೆ ಸಿದ್ಧ ವೈದ್ಯದಲ್ಲಿ ಉಲ್ಲೇಖಿಸಿರುವ ಲೋಹ, ಖನಿಜಗಳಿಂದ ವಿಶೇಷ ರೀತಿಯಲ್ಲಿ ತಯಾರಿಸಿದ ಭಸ್ಮ, ಸಿಂಧೂರ, ಸುಣ್ಣಗಳು 500 ವರ್ಷಗಳವರೆಗೂ ತಮ್ಮ ಔಷಧೀಯ ಗುಣಗಳನ್ನು ಕಾಪಾಡಿಕೊಂಡು ಕೆಡದಿರುವುದು. ಸಿದ್ಧ ವೈದ್ಯದ ಈ ರೀತಿಯ ವಿಶೇಷತೆಗಳು ಹತ್ತು ಹಲವು ಇದೆ ಎಂದು ತಿಳಿಸಿದರು.
ಮೈಸೂರು ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಕೆ.ಎಸ್.ರಾಧಾಕೃಷ್ಣರಾವ್, ಹಿರಿಯ ಆಯುರ್ವೇದ ತಜ್ಞರಾದ ಡಾ.ಎನ್.ಎಸ್.ರಾಮಚಂದ್ರ, ಡಾ.ಎ.ಎಸ್.ಚಂದ್ರಶೇಖರ್, ಹಿರಿಯ ವಕೀಲರಾದ ಓ.ಶ್ಯಾಂ ಭಟ್, ಸಿದ್ಧ ವೈದ್ಯರಾದ ಡಾ.ಸೆಲ್ವ ಷಣ್ಮುಗಂ, ಡಾ.ಅರುಳ್ ಅಮುದನ್, ಲೇಖಕ ಪಿ.ಎಸ್.ನರಸಿಂಹಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net