10 ರಂದು ಶ್ರೀಗಳ ಆಗಮನ ಖಚಿತ

Siddshwar shri
Published on

ಉಮದಿ: ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಇಂಡಿ ತಾಲೂಕಿನ ಕಾತ್ರಾಳ ಹಾಗೂ ಜತ್ತ ತಾಲೂಕಿನ ಬಾಲಗಾವ ಗುರುದೇವ ಆಶ್ರಮಕ್ಕೆ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಸೆ.10ರಂದು ಆಗಮಿಸುವುದು ಖಚಿತವಾಗಿದೆ.
ಕಾತ್ರಾಳ-ಬಾಲಗಾವದ ಗುರದೇವಾಶ್ರಮದಲ್ಲಿ ಸಿದ್ಧೇಶ್ವರ ಸ್ವಾಮೀಜಿ ಎರಡು ತಿಂಗಳಕ್ಕಿಂತ ಹೆಚ್ಚು ಕಾಲ ವಾಸ್ತವ್ಯ ಮಾಡಲಿದ್ದಾರೆ ಎಂದು ಗುರುದೇವಾಶ್ರಮದ ಅಮೃತಾನಂದ ಸ್ವಾಮೀಜಿ ಹೇಳಿದ್ದಾರೆ.
ಈ ಮೊದಲು ನಿಗದಿಯಾಗಿರುವಂತೆ ನಿತ್ಯ ಸಿದ್ಧೇಶ್ವರ ಶ್ರೀಗಳ ದರ್ಶನ ಹಾಗೂ ವಿವಿಧ ವಿಷಯಗಳ ಕುರಿತು ‘ಚಿಂತನ ಮಂಥನ’ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.
22 ವರ್ಷಗಳ ಹಿಂದೆ ಜತ್ತ ತಾಲೂಕಿನ ಉಮದಿಯಲ್ಲಿ ಸಿದ್ಧೇಶ್ವರ ಸ್ವಾಮೀಜಿಯವರು ಒಂದು ತಿಂಗಳು ವಾಸ್ತವ್ಯ ಮಾಡಿ, ನಿತ್ಯ ಪ್ರವಚನಾಮೃತ ನೀಡಿದ್ದರು. ಈಗ ಮತ್ತೆ ಎರಡು ದಶಕಗಳ ನಂತರ ಜತ್ತ ತಾಲೂಕು ಹಾಗೂ ಇಂಡಿ ತಾಲೂಕಿನ ಗಡಿಯಲ್ಲಿರುವ ಗುರುದೇವಾಶ್ರಮಕ್ಕೆ ಸಿದ್ಧೇಶ್ವರ ಸ್ವಾಮೀಜಿ ಆಗಮಿಸುತ್ತಿರುವುದು ಈ ಭಾಗದ ಕರ್ನಾಟಕ ಹಾಗೂ ಮಹಾರಾಷ್ಟ್ರದ ನೂರಾರು ಗ್ರಾಮಸ್ಥರಿಗೆ ಹಬ್ಬದ ವಾತಾವರಣ ತಂದಿದೆ. ಈ ಬಾರಿ ಅತ್ಯಧಿಕ ಸಮಯ ಸಿದ್ಧೇಶ್ವರ ಶ್ರೀಗಳು ಪ್ರವಚನಾಮೃತದ ಸವಿಯನ್ನು ಸವಿಯಲು ಕಾಲ ಕೂಡಿ ಬಂದಿದೆ.
ಈ ಭಾಗದ ರೈತರು, ವ್ಯಾಪಾರಿಗಳು, ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಚಿಂತನ, ಮಂಥನ, ಆಧ್ಯಾತ್ಮಿಕ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಅಮೃತಾನಂದ ಸ್ವಾಮೀಜಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net