ಸಿದ್ದೇಶ್ವರ ಸ್ವಾಮಿ ಮಹಾದ್ವಾರ ಲೋಕಾರ್ಪಣೆ

ಸಿದ್ದೇಶ್ವರ ಸ್ವಾಮಿ ಮಹಾದ್ವಾರ ಲೋಕಾರ್ಪಣೆ
Published on

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಕಣಕಟ್ಟೆ ಹೋಬಳಿಯ ರಾಮನಹಳ್ಳಿಯಲ್ಲಿ ನೆಲೆಸಿರುವ ಶ್ರೀ ಹಿರೇಕಲ್ಲು ಸಿದ್ದರ ಬೆಟ್ಟದ ಸಿದ್ದೇಶ್ವರ ಸ್ವಾಮಿಯವರ ನೂತನ ಮಹಾದ್ವಾರವನ್ನು ಶಾಸಕ ಕೆ.ಎಂ. ಶಿವಲಿಂಗೇಗೌಡ ಲೋಕಾರ್ಪಣೆ ಮಾಡಿದರು.

ಬಳಿಕ ಮಾತನಾಡಿದ ಅವರು, ಶ್ರೀ ಹಿರೇಕಲ್ಲು ಸಿದ್ದರಬೆಟ್ಟದ ಸಿದ್ದೇಶ್ವರ ಸ್ವಾಮಿಗೆ ನಾನು ಭಕ್ತನಾಗಿದ್ದು ಮೂರ್ನಾಲ್ಕು ಬಾರಿ ಬೆಟ್ಟವನ್ನು ಹತ್ತಿ ಎರಡು ರಾತ್ರಿ ಕಾಲ ಕಳೆದಿದ್ದೇನೆ. ದೇವಸ್ಥಾನದ ಗವಿಯ ಒಳಗೆ ಹೋದರೆ ಕೈಲಾಸವೇ ಧರೆಗಿಳಿದಂತಿದೆ. ಆ ಪರಮಾತ್ಮ ನೆಲೆಸಿರುವಂತಹ ಜಾಗವೇ ಕೈಲಾಸ ರೂಪದಲ್ಲಿದೆ. ಆ ಬೃಹದಾಕಾರದ ಬಂಡೆಯ ಒಳಗೆ ಎಂಟು ಕಂಬಗಳನ್ನೊಳಗೊಂಡು ವಿಶಾಲ ಜಾಗದಲ್ಲಿ ಸಾವಿರಾರು ಭಕ್ತರು ಬಂದರೂ ಸಹ ಗವಿಯ ಒಳಗೆ ಒಂದು ರಾತ್ರಿ ತಂಗಬಹುದಾದಷ್ಟು ವಿಶಾಲವಾಗಿದೆ. ಒಳಭಾಗದಲ್ಲಿ ಶ್ರೀ ಚನ್ನಬಸವೇಶ್ವರ ಗದ್ದಿಗೆ, ಸಿದ್ದೇಶ್ವರ ತ್ರಿಮೂರ್ತಿಗಳು ಮತ್ತು ಎಂಟು ಕಂಬಗಳ ಮಧ್ಯ 101 ಎಡೆ ಸೇವೆ, ಜಾಗ ಹೋಮ ನಡೆಸುವಂತಹ ಜಾಗವನ್ನು ನೋಡುತ್ತಿದ್ದರೆ ಬೆಟ್ಟದಿಂದ ಕೆಳಗೆ ಇಳಿಯಲು ಮನಸೇ ಬರುವುದಿಲ್ಲ ಎಂದು ಬೆಟ್ಟದ ಸೌಂದರ್ಯ ಹಾಗೂ ಹಿರಿಮೆಯನ್ನು ಬಣ್ಣಿಸಿದರು.

ಇಂತಹ ಭವ್ಯ ಗವಿಯೊಳಗೆ ಇರುವ ಸಿದ್ದೇಶ್ವರ ಬೇಡಿ ಬಂದ ಭಕ್ತರಿಗೆ ವರವನ್ನು ನೀಡುತ್ತಾ ಇಡೀ ತಾಲೂಕು ಹಾಗೂ ಜಿಲ್ಲೆಗಳಿಂದ ಬರುವವರ ಇಷ್ಟಾರ್ಥ ಈಡೇರಿಸುವ ದೈವವಾಗಿದೆ. ದೇವರ ಮೇಲೆ ನಂಬಿಕೆ ಇಲ್ಲದವರು ಆ ಬೆಟ್ಟದ ಗವಿಯೊಳಗೆ ಹೋದರೆ ಅವರು ಸಹ ಅದನ್ನು ನೋಡಿ ಕೈಲಾಸಕ್ಕೆ ಬಂದಿದ್ದೇವೆ ಅಂದುಕೊಳ್ಳುತ್ತಾರೆ. ಸಿದ್ದೇಶ್ವರರ ದರ್ಶನ ಪಡೆದು ಬಂದರೆ ಜ್ಞಾನೋದಯವಾದಂತೆ ಭಾಸವಾಗುತ್ತದೆ. ನಂಬಿಕೆಯನ್ನು ಅನುಸರಿಸಿ ಯಾರು ಬಾರುತ್ತಾರೋ ಅವರಿಗೆ ಭಗವಂತನು ಒಳ್ಳೇದು ಮಾಡುತ್ತಾನೆ ಎಂದರು.

12ನೇ ಶತಮಾನದಲ್ಲಿ ಮಾನವ ಕುಲ ಸಂಕಷ್ಟಕ್ಕೆ ಸಿಲುಕಿ ನಲಗುತ್ತಿದ್ದ ಸಮಯದಲ್ಲಿ ಬಸವಣ್ಣನವರು ಅವತರಿಸಿ ಬಂದು, ಅವರು ಹಾಕಿಕೊಟ್ಟಂತಹ ಮಾರ್ಗ, ಸಿದ್ಧಾಂತಗಳು ಇಂದಿನ ಆಧುನಿಕ ಪ್ರಪಂಚಕ್ಕೆ ದಾರಿ ದೀಪವಾಯಿತು. ಇಂದಿಗೂ ಮಠಮಾನ್ಯಗಳು ಇಲ್ಲದಿದ್ದರೆ ಮಾನವ ಕುಲ ಸಂಕಷ್ಟಕ್ಕೆ ಸಿಲುಕಿ ನಲಗುತ್ತಿತ್ತೇನೋ ಅನಿಸುತ್ತದೆ. ಇಂದು ಶ್ರೀ ಕ್ಷೇತ್ರದಲ್ಲಿ ಒಂದು ಭವ್ಯವಾದ ಸುಂದರವಾದ ಗೋಪುರವನ್ನು ಅನೇಕ ಗ್ರಾಮಸ್ಥರುಗಳು ಮತ್ತು ಭಕ್ತರು ಸೇರಿ ನಿರ್ಮಿಸಿರುವುದು ಅತ್ಯುತ್ತಮ ಕಾರ್ಯವಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಹೊಸದುರ್ಗ ತಾಲೂಕಿನ ಕುಂಚಗಿರಿ ಮಠದ ಪೀಠಾಧ್ಯಕ್ಷರಾದ ಕಾಯಕಯೋಗಿ ಶ್ರೀ ಶಾಂತವೀರ ಸ್ವಾಮೀಜಿ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಕುಟುಂಬದ ಸಮೃದ್ಧಿಗೆ ಸಂಸ್ಕಾರಯುತ ಶಿಕ್ಷಣ ಬೇಕು. ಸಾಮಾಜಿಕ ನ್ಯಾಯದ ಒಳ್ಳೆಯ ವ್ಯವಸ್ಥೆಯನ್ನು ಬಿತ್ತದೇ ಹೋದರೆ ನಮ್ಮ ಮಕ್ಕಳಿಂದ ಒಳ್ಳೆಯ ಸಂಸ್ಕಾರ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ನಾವು ನಮ್ಮ ಮಕ್ಕಳ ಉದಯದಲ್ಲಿ ಸಂಸ್ಕಾರಯುತ ಶಿಕ್ಷಣವನ್ನು, ಸನ್ನಡತೆಯ ಸಹಬಾಳ್ವೆಯನ್ನು ಕಲಿಸಬೇಕು. ಇಲ್ಲವಾದಲ್ಲಿ ಸಮಾಜ ದಾರಿ ತಪ್ಪುತ್ತಿದೆ ಎನ್ನುವುದನ್ನು ನಾವು ಕಾಣಬೇಕಾಗಿದೆ ಎಂದು ಹೇಳಿದರು.

ಆದಿಕಾಲದಿಂದ ಮಾನವ ಹಂತ ಹಂತವಾಗಿ ನಾಗರಿಕತೆಯಡೆಗೆ ಸಾಗಿದ. ಇಂದು ಅದೇ ನಾಗರಿಕತೆಯಿಂದ ಮತ್ತೆ ಅನಾಗರಿಕತೆ ಎಡೆಗೆ ಸಾಗುವುದು ಬೇಡ. ಶಿಕ್ಷಣ ಪಡೆದವರಿಂದ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಆದರೆ ಇಂದು ಶಿಕ್ಷಿತರೇ ಶ್ರೀಮಂತಿಕೆ ಆಸೆಗೆ ಬಿದ್ದು ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿದ್ದಾರೆ ಎಂದರು.

ಮಾನವನಿಗೆ ದುರಾಸೆ ಇರಬಾರದು. ಮಾನವ ಮಹಾದೇವನಾಗಬೇಕು ಎಂದು ಬಸವಣ್ಣನವರು ಆಗಿನ ಕಾಲದಲ್ಲಿ ಹೇಳಿದರು. ಎಲ್ಲಾ ಸಂತರು ಇದನ್ನೇ ಹೇಳಿಹೋಗಿದ್ದಾರೆ. ಆದರೆ ನಾವು ಮಾಡುವಂತಹ ಕೆಲಸವಾದರೂ ಏನು? ದೇವಸ್ಥಾನದ ಒಳಗಡೆ ಹೋದರೆ ಭಕ್ತರು ದೇವಸ್ಥಾನದಿಂದ ಹೊರಗಡೆ ಬಂದ ಕೂಡಲೇ ತಮ್ಮ ಭ್ರಷ್ಟ ಕೆಲಸ ಮುಂದುವರಿಸುತ್ತಾರೆ ಎಂದು ಇಂದಿನ ಪರಿಸರದ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಕರಿಸಿದ್ದೇಶ್ವರ ಮಠದ ಪೀಠಾಧಿಪತಿ ಶ್ರೀ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಶ್ರೀ ಗುರು ಪರದೇಶಿಕೇಂದ್ರ ಮಹಾಸ್ವಾಮಿಗಳು, ರಂಗಾಪುರ ಮಠದ ಶ್ರೀ ಕರಿ ವೃಷಭ ದೇಶೀ ಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ, ಕಾಡು ಸಿದ್ದೇಶ್ವರ ಮಠ ನೊಣವಿನಕೆರೆ, ರುದ್ರಮುನಿ ಮಹಾಸ್ವಾಮೀಜಿ, ನಿರಂಜನ ಪೀಠ ಮಾಡಾಳು, ಶಶಿ ಶೇಖರ ಸಿದ್ದ ಬಸವ ಸ್ವಾಮೀಜಿ ಬೂದಾಳ್ ವಿರಕ್ತಮಠ, ಡಿ ಎಂ ಕುರ್ಕೆ, ಮಾಜಿ ಶಾಸಕ ಜಿಎಸ್ ಪರಮೇಶ್ವರಪ್ಪ, ಶ್ರೀ ಬೆಟ್ಟದ ಸಿದ್ದೇಶ್ವರ ಅಭಿವೃದ್ಧಿ ಸಮಿತಿ ಅಧ್ಯಕ್ಷ ವೈ ಬಿ ಜಯಣ್ಣ, ಎನ್ ಬಿ ಸಿದ್ದಪ್ಪ, ಎನ್.ಆರ್. ಚನ್ನಬಸವಯ್ಯ, ಬಿಜೆಪಿ ಮುಖಂಡ ಶಂಭುಲಿಂಗಪ್ಪ, ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸಿ.ಸಿ. ಮಹೇಶ್ವರಪ್ಪ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಡಿಎಂ ಹೊಳಿಯಪ್ಪ, ಸಿದ್ದರಾಮೇಗೌಡ. ಎನ್ ಎಸ್ ಶಂಕರ ಲಿಂಗಪ್ಪ ವೇದಿಕೆಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net