ಸಂತೋಷದಿಂದ ಬಾಳುವುದೇ ಜೀವನ

Siddeshwar shri
Published on

ನಮ್ಮದು ಸಂತ, ಋಷಿ, ಶರಣ ನಾಡು. ಸತ್ಯ ನುಡಿಯುವ ಋಷಿಗಳು, ಹೃದಯಲ್ಲಿ ಭಕ್ತಿ ತುಂಬಿಕೊಂಡವರು ಶರಣರು, ಮನಸ್ಸನ್ನು ಹದಗೊಳಿಸಿಕೊಂಡ ಮುನಿಗಳು. ಅಂತಹವರು ಬದುಕಿರುವ ಸುಂದರನಾಡು ನಮ್ಮ ದೇಶ.

ಸುಂದರವಾದ ನಿಸರ್ಗದೊಂದಿಗೆ ಒಡನಾಟದ ಜತೆಗೆ ಬದುಕುವವರು ಭಾರತೀಯರು. ನಮಗೆ ಏನು ಕೊರತೆ ಇಲ್ಲ. ನಾವು ಇದ್ದಲ್ಲಿಗೆ ಸೂರ್ಯನು ಬೆಳಕು ಕೊಡುತ್ತಾನೆ. ನಾವಿದ್ದಲ್ಲಿಗೆ ಮೇಘ ಮಳೆ ಸುರಿಸುತ್ತವೆ. ನಾವು ಇದ್ದಲ್ಲಿಗೆ ಗಾಳಿ ಬೀಸುತ್ತದೆ. ಬದುಕನ್ನು ಹಬ್ಬ ಮಾಡಿ ಬದುಕಬೇಕು. ಪ್ರತಿ ದಿನವನ್ನು ಸಂತೋಷದಿಂದ ಕಳೆಯಬೇಕು. ನಾಲ್ಕು ಕಾಸಿಗಾಗಿ, ಗೇಣು ಭೂಮಿಗಾಗಿ ಬದುಕನ್ನು ಕೆಡಿಸಿಕೊಳ್ಳಬಾರದು. ಈ ಭೂಮಿ ನಮ್ಮೆಲ್ಲರಿಗಾಗಿಯೇ ಇದೆ. ಏತಕ್ಕಾಗಿ ಹೋರಾಟ. ಸಂತೋಷದಿಂದ ಬಾಳಿ ಬದುಕಲು ಬಂದವರು ನಾವು. ಸಂತೋಷ ಪಡುತ್ತ ಬದುಕು ಸಾಗಿಸೋಣ. ಪಕ್ಷಿಗಳು ಯಾರ ಎದುರೂ ಕೈಚಾಚುವುದಿಲ್ಲ. ಭಿಕ್ಷೆ ಬೇಡುವುದಿಲ್ಲ. ದೇವರು ನಮಗೆ ಎಲ್ಲರಿಗಿಂತ ಹೆಚ್ಚು ಕೊಟ್ಟಿದ್ದಾನೆ. ಇಂದ್ರೀಯಗಳನ್ನು ನೀಡುವುದರ ಜತೆ ಬುದ್ಧಿಯನ್ನು ನೀಡಿದ್ದಾನೆ. ಜತೆಗೆ ನೂರ ವರ್ಷ ಆಯುಷ್ಯ ನೀಡಿದ್ದಾನೆ. ಸೂರ್ಯ ಬಂದರೆ ಜಗವೆಲ್ಲ ನಲಿದಾಡುವುದು. ಚಂದ್ರ ಬಂದರೆ ಹೃದಯ ತಂಪಾಗುತ್ತದೆ. ಸೂರ್ಯ ಬರುತ್ತಾನೆ, ಹೋಗುತ್ತಾನೆ. ಎಲ್ಲವೂ ಬರುತ್ತದೆ, ಹೋಗುತ್ತದೆ.

ಕಾಲ (ಸಮಯ) ಹೇಳುತ್ತದೆ ‘ನನ್ನನ್ನು ಬಳಸಿಕೋ, ಪ್ರತಿ ಕ್ಷಣದಲ್ಲಿ ಬಂದು ಮಾಧುರ್ಯ ತುಂಬಿ ಜೀವನದ ಪ್ರತಿಕ್ಷಣ ಜೇನಿನಿಂದ ತುಂಬಬೇಕು. ಹಾಗೆ ಮಾಡು ಮನುಷ್ಯನೇ’ ನಾವು ಏನು ಮಾಡಬೇಕಾಗಿಲ್ಲ, ಸ್ವಚ್ಛ ಮನಸ್ಸಿನಿಂದ ಅನುಭವಿಸಬೇಕು. ಇದೆಲ್ಲ ಕಾಲನ ಲೀಲೆ. ಕಾಲ ಬದಲಾಗುತ್ತ ಬದಲಾಗುತ್ತ ದೇಹವನ್ನು ಬೆಳೆಸುತ್ತದೆ. ಹಗಲು-ರಾತ್ರಿ ಬರುತ್ತವೆ, ಹೋಗುತ್ತವೆ. ಕಾಲ ನಿಂತಿಲ್ಲ. ಕಾಲ ಬದಲಾಗುತ್ತ ಹೋಗುತ್ತದೆ. ಅದಕ್ಕಾಗಿ ಸಂತೋಷದಿಂದ ಬದುಕು.

ಒಬ್ಬ ಮಹಾರಾಜ ಒಂದು ದಿನ ಡಂಗುರ ಸಾರಿದ, ‘ನಾನು ಭೂಮಿಯನ್ನು ಕೊಡುತ್ತೇನೆ. ನಿಮಗೆ ಎಷ್ಟು ಬೇಕೋ ಅಷ್ಟು ನೀವು ಬೆಳಗ್ಗೆ ಓಡಲು ಆರಂಭಿಸಿ, ಸಂಜೆ ಎಲ್ಲಿ ನಿಲ್ಲುವಿರೋ ಅಷ್ಟೆಲ್ಲ ಭೂಮಿ ನಿಮ್ಮದು’ ಎಂದು ಹೇಳಿದ. ಮರುದಿನ ಬೆಳಗ್ಗೆ ಗುಡ್ಡದ ಮೇಲೆ ಮಹಾರಾಜ ಬಂದು ಕುಳಿತ. ಒಬ್ಬ 70 ವಯಸ್ಸಿನ ಮುದುಕ ಓಡಲು ಬಂದ. ರಾಜನಿಗೆ ಸಂತೋಷವಾಯಿತು. ರಾಜ ಓಡಲು ಸಂಕೇತ ಕೊಟ್ಟ. ಓಟ ಪ್ರಾರಂಭವಾಯಿತು. ಮುದುಕ ನೀರು ಕುಡಿಯಲಿಲ್ಲ, ಊಟ ಮಾಡಲಿಲ್ಲ. ಅವನಿಗೆ ಅನಿಸಿತ್ತು ನಾನು ನೀರು ಕುಡಿದರೆ, ಊಟ ಮಾಡಿದರೆ ಭೂಮಿ ಕಳೆದು ಕೊಳ್ಳುತ್ತೇನೆ. ಆಸೆ ಓಡಿಸಲು ಹಚ್ಚಿತ್ತು. ಓಡಿದಾ ಓಡಿದಾ ಇನ್ನೇನು ಮಹಾರಾಜನನ್ನು ಮುಟ್ಟುವುದರಲ್ಲಿ ಆತನ ಹೃದಯ ನಿಂತಿತು. ಅವನ ಆಯುಷ್ಯ ಮುಗಿದಿತ್ತು. ಆಸೆ ಮುಗಿದಿದ್ದಿಲ್ಲ. ಭೂಮಿ ಹೇಳುತ್ತೆ ನಮ್ಮ ಮಾಲೀಕರು ಯಾರು ಇಲ್ಲ. ಎಲ್ಲರೂ ಬರುತ್ತಾರೆ ಹೋಗುತ್ತಾರೆ. ಆದರೆ, ನಾನು ಮಾತ್ರ ಇದ್ದಲ್ಲೇ ಇದ್ದೇನೆ.

ಒಂದು ಮುತ್ತಿನ ಹಾರ ನೋಡಿ. ಅದರಲ್ಲಿ ನೂರಾರು ಮಣಿಗಳಿರುತ್ತವೆ. ಅವೆಲ್ಲ ಒಂದೇ ದಾರದಲ್ಲಿ ಪೋಣಿಸಲ್ಪಟ್ಟಿರುತ್ತವೆ. ಆದರೆ, ದಾರ ಕಾಣುವುದಿಲ್ಲ. ದಾರ ಇಲ್ಲದಿದ್ರೆ ಮುತ್ತುಗಳು ನಿಲ್ಲುವುದಿಲ್ಲ. ಒಂದು ಹಾರ ಆಗಬೇಕಾದರೆ ದಾರಬೇಕು. ಹಾಗೆಯೇ ದೇವರು ಇದ್ದಾನೆ. ಸೂತ್ರ ಒಂದೇ ಇರುತ್ತದೆ. ಮಣಿಗಳು ಮಾತ್ರ ಭಿನ್ನವಾಗಿರುತ್ತವೆ. ಭಿನ್ನ ಭಿನ್ನ ತರಹ ಶರೀರದ ಒಳಗೆ ಒಂದು ಆತ್ಮ ದೇವಸೂತ್ರ. ಅದು ಎಲ್ಲರಲ್ಲೂ ಇದೆ. ದೇಹಗಳು ಅಂದರೆ ಮುತ್ತುಗಳು ಇದ್ದಹಾಗೆ. ಸೂತ್ರ ಅಂದರೆ ದೇವರು. ಸಂತರು, ಮಹಾಂತರು ನಮಗೆ ಒಳ್ಳೆಯ ಮಾತುಗಳನ್ನು ಹೇಳಿದ್ದಾರೆ. ಅವರ ಒಳ್ಳೆಯ ಮಾತುಗಳನ್ನು ಪಾಲಿಸಿ, ಸಂತೋಷದಿಂದ ಜೀವನ ಸಾಗಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net