ದೀಪ ಬೆಳಗಿ ಸಂಭ್ರಮಪಟ್ಟ ಭಕ್ತರು, ಶ್ರೀ ಸಿದ್ಧಾರೂಢಸ್ವಾಮಿ ಮಠದಲ್ಲಿ ಕಾತಿರ್ಕೋತ್ಸವ

IMG_20231212_213338_247.jpg
Published on

ಹುಬ್ಬಳ್ಳಿ: ಇಲ್ಲಿಯ ಸಿದ್ಧಾರೂಢ ಮಠದ ಆವರಣ ಮಂಗಳವಾರ ದೀಪಗಳಿಂದ ಕಂಗೊಳಿಸಿತು. ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ವಿವಿಧೆಡೆಯ ಭಕ್ತರು ದೀಪ ಬೆಳಗಿ ಸಂಭ್ರಮಪಟ್ಟರು.

ಅಂಧಕಾರ ಓಡಿಸಿ ಜ್ಞಾನದ ಬೆಳಕು ಚೆಲ್ಲುವ ಕಾತಿರ್ಕೋತ್ಸವವನ್ನು ಶ್ರೀಮಠದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ತಿಕ ಅಮಾವಾಸ್ಯೆ ನಿಮಿತ್ತ ನಾಡಿನ ನಾನಾ ಭಾಗಗಳಿಂದ ಆಗಮಿಸಿದ್ದ ಭಕ್ತರು ಶ್ರೀ ಸಿದ್ಧಾರೂಢಸ್ವಾಮಿ ಹಾಗೂ ಶ್ರೀ ಗುರುನಾಥರೂಢ ಸ್ವಾಮಿಯ ಗದ್ದುಗೆ ದರ್ಶನ ಪಡೆದರು. ಸಂಜೆ ಹೊತ್ತಿಗೆ ಮಠದ ಆವರಣದಲ್ಲಿ ಇಡಲಾಗಿದ್ದ ದೀಪಗಳಿಗೆ ಎಣ್ಣೆ ಹಾಕಿ ಭಕ್ತಿಯ ದೀಪ ಬೆಳಗಿದರು. ಶ್ರೀಮಠದಲ್ಲಿ ಏರ್ಪಡಿಸಿದ್ದ ಲಕ್ಷ ದೀಪೋತ್ಸವದಲ್ಲಿ ಎಲ್ಲಿ ನೋಡಿದರೂ ಭಕ್ತಸಾಗರವೇ ಹರಿದು ಬಂದಿತ್ತು.

ಇದಕ್ಕೂ ಮೊದಲು ಶ್ರೀಮಠದ ಆವರಣದಲ್ಲಿ ರಂಗೋಲಿ ಬಿಡಿಸಿ, ಹೂವಿನ ಅಲಂಕಾರ ಮಾಡಲಾಗಿತ್ತು. ಅದರ ಮಧ್ಯೆ ಹಣತೆಗಳನ್ನಿಟ್ಟು ದೀಪ ಹಚ್ಚಲಾಯಿತು. ಇಷ್ಟಾರ್ಥ ಸಿದ್ಧಿಸುವ ಸಿದ್ಧಾರೂಢರನ್ನು ನನೆಯುತ್ತ ಭಕ್ತರು ಶಿವನಾಮ ಸ್ಮರಿಸಿದರು.

ಆಕಾಶ ಬುಟ್ಟಿಗಳನ್ನು ತಯಾರಿಸಿ ಹಾರಿ ಬಿಡಲಾಯಿತು. ಸಿಡಿಮದ್ದುಗಳು ಬಾನಂಗಳದಲ್ಲಿ ಚಿತ್ತಾರ ಮೂಡಿಸಿದವು.

ದೀಪೋತ್ಸವಕ್ಕೆ ಚಾಲನೆ: ಶ್ರೀಮಠದ ಮುಖ್ಯ ಆಡಳಿತಾಧಿಕಾರಿ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶೆ ಕೆ.ಜಿ. ಶಾಂತಿ ಅವರು ದೀಪೋತ್ಸವಕ್ಕೆ ಚಾಲನೆ ನೀಡಿದರು. ಲಕ್ಷ ದೀಪೋತ್ಸವವು ಕತ್ತಲೆ ಕಳೆದು ಬೆಳಕು ನೀಡುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ಜ್ಞಾನದ ಬೆಳಕು ಮೂಡಬೇಕು. ಸತ್ಯ ಧರ್ಮ, ನ್ಯಾಯ, ನಿಷ್ಠೆಗಳನ್ನು ಎಲ್ಲರೂ ಪಾಲಿಸಬೇಕು. ದೀಪ ಬೆಳಗುವ ಹಾಗೇ ಎಲ್ಲರ ಜೀವನ ಬೆಳಗಲಿ ಎಂದು ಹಾರೈಸಿದರು.
ಜೀವನದಲ್ಲಿ ಕಷ್ಟದಲ್ಲಿರುವವರಿಗೆ ಬೆಳಕಾಗುವ ಮೂಲಕ ಈ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು. ಸದ್ಗುರು ಸಿದ್ಧಾರೂಢರನ್ನು ನೆನೆದವರಿಗೆ ಕಷ್ಟ ಎನ್ನುವುದಿಲ್ಲ. ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೆ ಮುನ್ನಡೆಯಬೇಕು. ಸಿದ್ಧಾರೂಢ ಅಜ್ಜನವರ ಕೃಪೆ ಎಲ್ಲರ ಮೇಲಿರಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಕಮೀಟಿ ಚೇರ್ಮನ್ ಬಸವರಾಜ ಕಲ್ಯಾಣಶೆಟ್ಟರ ಮಾತನಾಡಿ, ಶ್ರೀಮಠದಲ್ಲಿ ಕಳೆದ 30 ವರ್ಷದಿಂದ ಲಕ್ಷ ದೀಪೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಸದ್ಗುರುಗಳು ಹಚ್ಚಿರುವ ಜ್ಞಾನದ ದೀಪ ಇಂದು ಜಗತ್ತಿನಾದ್ಯಂತ ಬೆಳಗುತ್ತಿದೆ. ಶ್ರೀ ಸಿದ್ದಾರೂಢರು ಹಚ್ಚಿರುವ ದೀಪ ನಮ್ಮೆಲ್ಲರ ಬಾಳಿನಲ್ಲಿ ಬೆಳಕು ಮೂಡಿಸಿದೆ ಎಂದರು.

ದೀಪೋತ್ಸವಕ್ಕೆ ಧಾರವಾಡ ಜಿಲ್ಲೆ ಅಷ್ಟೇ ಅಲ್ಲದೇ ಅಕ್ಕಪಕ್ಕದ ಜಿಲ್ಲೆ, ನೆರೆಯ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಭಕ್ತಿ ಸಮರ್ಪಣೆ ಮಾಡುತ್ತಾರೆ ಎಂದರು.

ಶ್ರೀಮಠದ ಭಕ್ತರ ಮೇಲ್ಮನೆ ಅಧ್ಯಕ್ಷ ಡಿ.ಆರ್. ಪಾಟೀಲ ಮಾತನಾಡಿ, ಶ್ರೀಮಠದ ಭಕ್ತರಲ್ಲಿ ಯಾವುದೇ ಭೇದಭಾವ ಇಲ್ಲ. ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕು. ನಾವೆಲ್ಲರೂ ಒಂದು ಎನ್ನುವುದನ್ನು ಶ್ರೀಮಠ ತೋರಿಸಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಸಿದ್ಧಾರೂಢಮಠದ ಶ್ರೀ ಶಾಂತಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

ನಿವೃತ್ತ ನ್ಯಾಯಾಧೀಶ ಗಣೇಶ ಕುರುವತ್ತಿ, ಶ್ರೀಮಠದ ಟ್ರಸ್ಟ್ ಕಮಿಟಿ ಪದಾಧಿಕಾರಿಗಳಾದ ಡಾ. ಗೋವಿಂದ ಮಣ್ಣೂರ, ಮುಂಗರವಾಡಿ, ಕೆ.ಎಲ್. ಪಾಟೀಲ, ಸರ್ವಮಂಗಳಾ ಪಾಠಕ ಮೊದಲಾದವರಿದ್ದರು.

ಸದಾನಂದ ಬೆಂಡಿಗೇರಿ ಪ್ರಾಥಿರ್ಸಿದರು. ಶಾಮಾನಂದ ಪೂಜೇರಿ ಸ್ವಾಗತಿಸಿದರು. ಎಸ್.ಐ. ಕೋಳಕೂರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net