ಸಮಾಜ ತಿದ್ದುವ ವಚನ ನೀಡಿದ ಸಿದ್ಧರಾಮೇಶ್ವರ: ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಹೇಳಿಕೆ

Siddarameshwara Jayanti mandya
Published on

ಮಂಡ್ಯ: ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಅಲ್ಲಮಪ್ರಭು ಅವರ ಪ್ರಭಾವದಲ್ಲಿ ಶರಣರ ಕೂಟವನ್ನು ರಚನೆ ಮಾಡಿಕೊಂಡು ಸಮಾಜವನ್ನು ತಿದ್ದುವ ವಚನಗಳನ್ನು ಸಿದ್ಧರಾಮೇಶ್ವರ ನೀಡಿದ್ದರು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಸಿದ್ಧರಾಮೇಶ್ವರ ಜಯಂತಿಯಲ್ಲಿ ಮಾತನಾಡಿದ ಅವರು, ಪ್ರಮುಖ ವಚನಕಾ ಸಿದ್ಧರಾಮೇಶ್ವರ ಅವರ ಆದರ್ಶ ಹಾಗೂ ತತ್ವಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.

12ನೇ ಶತಮಾನದ ವಚನಕಾರರನ್ನು 21ನೇ ಶತಮಾನದಲ್ಲಿಯೂ ನೆನಪಿನಲ್ಲಿ ಇಟ್ಟುಕೊಂಡಿದ್ದೇವೆಂದರೆ ಅವರ ಮೇಲೆ ಇರುವ ಭಕ್ತಿಯಿಂದ ಮಾತ್ರವಲ್ಲ, ಬದಲಿಗೆ ಕೊಟ್ಟಂತಹ ಜ್ಞಾನ ಮತ್ತು ತಿಳಿವಳಿಕೆಯಿಂದ. ಮಹಾನ್ ವ್ಯಕ್ತಿಗಳು ನೀಡಿದ ಜ್ಞಾನವನ್ನು ಅಳವಡಿಸಿಕೊಂಡು ಸಮಾಜವನ್ನು ಸರಿಯಾದ ಮಾರ್ಗದಲ್ಲಿ ತರಬೇಕು ಎಂದು ಹೇಳಿದರು.

ಸಿದ್ಧರಾಮೇಶ್ವರ ಅವರು ಸಮಾಜ ತಿದ್ದುವುದಕ್ಕೆ ಹಾಗೂ ಲೋಪದೋಷಗಳನ್ನು ಸರಿಪಡಿಸಲು ಸರಳ ಭಾಷೆಯಲ್ಲಿ ಜನ ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಹೇಳುತ್ತಿದ್ದರು. ವಚನಕಾರರ ಕ್ಷೇತ್ರದಲ್ಲಿ ಸಿದ್ದರಾಮೇಶ್ವರ ಅವರು ಕೂಡ ಬಹಳ ಪ್ರಮುಖವಾದ ವ್ಯಕ್ತಿ. ಅವರ ಜ್ಞಾನವನ್ನು ಪರಿಶೀಲನೆ ಮಾಡುವುದಕ್ಕೆ ಅಲ್ಲಮಪ್ರಭು ವಿಶೇಷವಾಗಿ ಅವರೊಂದಿಗೆ ಸಂವಾದ ಮಾಡುತ್ತಿದ್ದರು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್.ಉದಯ್‌ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ರಾಜಮೂರ್ತಿ, ಡಿಡಿಪಿಐ ಶಿವರಾಮೇಗೌಡ, ಮುಖಂಡರಾದ ಸುಜಾತಾಕೃಷ್ಣ, ಗುರಪ್ಪ, ಎಲ್.ಸಂದೇಶ್, ಶಂಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net