

ಉಡುಪಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಟ್ಟುಹಬ್ಬ ಅಂಗವಾಗಿ ಆ.3ರಂದು ಅಭಿಮಾನಿಗಳು ಸೇರಿ ಸಂಭ್ರಮಾಚರಣೆ ಮಾಡಲು ತೀರ್ಮಾನಿಸಿದ್ದಾರೆ. ಈ ಸಭೆ ಕಾಂಗ್ರೆಸ್ ಪಕ್ಷದ ಶಕ್ತಿಪದರ್ಶನಕ್ಕೆ ವೇದಿಕೆಯಾಗಲಿದೆ ಎಂದು ಕಾಂಗ್ರೆಸ್ ಮುಖಂಡ ಮಧುಬಂಗಾರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾವೇಶ ಯಾವುದೇ ವ್ಯಕ್ತಿಯ ವೈಭವೀಕರಣವಲ್ಲ. ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಬೆಳೆಸಿದ ನಾಯಕನಿಗೆ ಅಭಿಮಾನಿಗಳು ಗೌರವ ಸಲ್ಲಿಸುವ ದಿನ. ಪಕ್ಷ ಸಂಘಟನೆಗೂ ಈ ಸಂದರ್ಭವನ್ನು ಬಳಸಿಕೊಳ್ಳಲಾಗುವುದು. ಕರ್ನಾಟಕದ ಮೂಲಕ ದೇಶದಲ್ಲಿ ಒಳ್ಳೆಯ ಭವಿಷ್ಯ ಗೋಚರಿಸಲಿದೆ. ಕಾರ್ಯಕ್ರಮದ ಬಗ್ಗೆ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ ಎಂದು ತಿಳಿಸಿದರು.
ಮಾಜಿ ಶಾಸಕ ಅಭಯಚಂದ್ರ ಜೈನ್ ಮಾತನಾಡಿ, ಯಡಿಯೂರಪ್ಪ ಅವರು ಮಗನಿಗೆ ಸ್ಥಾನ ಬಿಟ್ಟುಕೊಡುವುದರಲ್ಲಿ ಯಾವುದೇ ವಿಶೇಷತೆ ಇಲ್ಲ. ಕುಟುಂಬದಿಂದ ಹೊರತಾದ ವ್ಯಕ್ತಿಗೆ ಟಿಕೇಟ್ ನೀಡಬೇಕು. ಮುಂದಿನ ಚುನಾವಣೆಯಲ್ಲಿ ಮೂಲ್ಕಿ-ಮೂಡುಬಿದ್ರಿ ಕ್ಷೇತ್ರದಲ್ಲಿ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಯುವ ನಾಯಕ ಮಿಥುನ್ ರೈ ಅವರಿಗೆ ಟಿಕೇಟ್ ನೀಡುವಂತೆ ಈಗಾಗಲೇ ವರಿಷ್ಠರನ್ನು ಕೋರಿದ್ದೇನೆ ಎಂದರು.
ಕಾಂಗ್ರೆಸ್ ಪಕ್ಷ ನಾಶವಾದರೆ ನಾವೂ ಅಸ್ತಿತ್ವ ಕಳೆದುಕೊಳ್ಳುತ್ತೇವೆ. ಹೀಗಾಗಿ ಪಕ್ಷದಲ್ಲಿ ಗುಂಪುಗಾರಿಕೆಗೆ ಅವಕಾಶ ನೀಡಬಾರದು. ಈ ಹಿಂದೆ ನಾವು ಗುಂಪುಗಾರಿಕೆ ಮಾಡಿದವರು. ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ ಎಂದು ತಿಳಿಸಿದರು.