

ಹುಬ್ಬಳ್ಳಿ : ನ್ಯಾಯಾಲಯದ ಆದೇಶದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೌರವ ಇದ್ದರೆ ಕೂಡಲೇ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಒತ್ತಾಯಿಸಿದ್ದಾರೆ.
ಸರ್ಕಾರಿ ಅಧಿಕಾರಿಗಳನ್ನು ಕೈಗೊಂಬೆ ಮಾಡಿಕೊಂಡು, ಗಣೇಶೋತ್ಸವ ಆಚರಣೆಗೆ ಒಪ್ಪಿಗೆ ನೀಡಲು ವಿಳಂಬ ಮಾಡುತ್ತಿರುವುದನ್ನು ಗಮನಿಸಿದರೆ ರಾಜ್ಯ ಕಾಂಗ್ರೆಸ್ ಸರ್ಕಾರದ ಹಿಂದು ವಿರೋಧಿ ನೀತಿ ಸ್ಪಷ್ಟವಾಗುತ್ತದೆ ಎಂದು ಹೇಳಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದುಗಳ ಭಾವನೆಗೆ ಧಕ್ಕೆ ತರುತ್ತಿದೆ. ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿಯೇ ತೀರುತ್ತೇವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಪಾಲಿಕೆ ನಿರ್ಧಾರ ಪ್ರಶ್ನಿಸಿ, ಅಂಜುಮನ್ ಇಸ್ಲಾಂ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಹೈಕೋರ್ಟ್ ತಿರಸ್ಕರಿಸಿದೆ. ಆ ಮೂಲಕ ಎರಡನೇ ವರ್ಷವೂ ಈ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಸಿಕ್ಕಂತಾಗಿದೆ ಎಂದು ವ್ಯಕ್ತಪಡಿಸಿದ್ದಾರೆ.
ಹಿಂದುಗಳ ಭಾವನೆಗೆ ಹಾಗೂ ಕರ್ನಾಟಕದ ಜನತೆಗೆ ಕೋರ್ಟ್ ತೀರ್ಪಿನಿಂದ ಜಯವಾಗಿದೆ ಎಂದು ಸಚಿವ ಜೋಶಿ ಹೇಳಿದ್ದಾರೆ.