

ಬಾಳೆಹೊನ್ನೂರು: ಮುಡಾ ಹಗರಣ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ದಾಖಲಾಗಿರುವ ಸಂದರ್ಭದಲ್ಲಿ ಅವರು ತೆಗೆದುಕೊಂಡಿರುವ ನಿಲುವು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದು ಪ್ರಜಾಪ್ರಭುತ್ವ ಉಳಿಸಿ ಆಂದೋಲನ ವೇದಿಕೆ ಸಂಚಾಲಕ ನಾಗೇಶ್ ಆಂಗೀರಸ ಹೇಳಿದ್ದಾರೆ.
ದಿ.ರಾಮಕಷ್ಣ ಹೆಗ್ಡೆ ಅವರ ಮೌಲ್ಯಾಧಾರಿತ ರಾಜಕಾರಣದ ಗರಡಿಯಿಂದ ಗುರುತಿಸಿಕೊಂಡ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸೇರಿದ ಬಳಿಕ ಅದೇ ರಾಮಕೃಷ್ಣ ಹೆಗ್ಡೆ ಅವರು ತಂದ ಲೋಕಾಯುಕ್ತದ ಕಣ್ಣು ಮುಚ್ಚಿಸಿದ್ದಾರೆ. ಸಿದ್ದರಾಮಯ್ಯನವರ ಮೊದಲ ಹಾಗೂ ಪ್ರಸ್ತುತ ಆಡಳಿತದ ಅವಧಿಯಲ್ಲಿ ಅವರ ಸಂಪುಟ ಸಚಿವರ, ಶಾಸಕರ ಕಿರುಕುಳ ತಡೆಯಲಾರದೆ ಅನೇಕ ಸರ್ಕಾರಿ ಅಧಿಕಾರಿಗಳು ಆತ್ಮಹತ್ಯೆಗೆ ಶರಣಾಗಿರುವುದು ಅವರ ಆಡಳಿತ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದಿದ್ದಾರೆ.
ಮುಖ್ಯಮಂತ್ರಿ ತಮ್ಮ ಸಂಪುಟದ ಸಚಿವರ ಭ್ರಷ್ಟಾಚಾರಕ್ಕೆ ಬೆನ್ನೆಲುಬಾಗಿ ನಿಂತಿದ್ದು, ಎಸ್ಸಿ, ಎಸ್ಟಿ ಹಣ ಅನ್ಯ ಉದ್ದೇಶಕ್ಕೆ ಬಳಸಿ ಇದೂವರೆಗಿನ ಅವರ ಸಿದ್ಧಾಂತಕ್ಕೆ ತಿಲಾಂಜಲಿ ಇಟ್ಟಿದ್ದಾರೆ. ಕೇರಳ, ಪಶ್ಚಿಮ ಬಂಗಾಳದ ಹಿಂಸಾಚಾರ ರಾಜಕೀಯ ಕರ್ನಾಟಕಕ್ಕೆ ಕಾಲಿರಿಸಲು ವೇದಿಕೆ ಒದಗಿಸಿದ್ದಾರೆ. ಬ್ರಿಟೀಷರ ತಂತ್ರಗಾರಿಕೆಯಂತೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹಿಂದು, ಮುಸ್ಲಿಂ ಸಮುದಾಯದ ನಡುವೆ ದ್ವೇಷದ ಕಿಡಿ ಹೊತ್ತಿಸಿ ಇದೀಗ ರಾಜ್ಯಾದ್ಯಂತ ಪಸರಿಸಲು ವೇದಿಕೆ ಮಾಡಿಕೊಟ್ಟಿದ್ದಾರೆ. ಕೇವಲ ಪೋನ್ ಕದ್ದಾಲಿಕೆ ಆಪಾದನೆ ಬಂದಾಗ ಸಲ್ಲಿಸಿದ್ದ ರಾಮಕೃಷ್ಣ ಹೆಗ್ಡೆ ಅವರ ನಿಲುವನ್ನು ಸಿದ್ಧರಾಮಯ್ಯ ಅಷ್ಟು ಬೇಗ ಮರೆತರೆ ಎಂಬುದು ಪ್ರಶ್ನೆಯಾಗಿದೆ. ಮುಖ್ಯಮಂತ್ರಿಗಳಿಗೆ ನೈತಿಕತೆಯಿದ್ದರೆ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ತಾವು ಹೇಳಿಕೊಂಡ ಸಿದ್ಧಾಂತಕ್ಕೆ ಬದ್ಧರಾಗಬೇಕು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.