

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕಾರಣದ ಯಶೋಗಾಥೆ, ಜೀವನ ದೃಷ್ಟಿಕೋನ ಒಂದು ಮುಷ್ಠಿಗೆ ಸಿಗುವಂತದಲ್ಲ ಎಂದು ಸಂಸ್ಕೃತ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಪದ್ಮಾಶೇಖರ್ ಅಭಿಪ್ರಾಯಪಟ್ಟರು.
ಮಾನಸಗಂಗೋತ್ರಿಯ ರಾಣಿ ಬಹಾದ್ದೂರ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಕನ್ನಡ ಸಾಹಿತ್ಯ ಕಲಾಕೂಟ, ಎಚ್.ವಿ.ರಾಜೀವ್ ಸ್ನೇಹ ಬಳಗದಿಂದ ಭಾನುವಾರ ಆಯೋಜಿಸಿದ್ದ ಡಾ.ಮಹೇಶ್ ದಳಪತಿ ರಚಿಸಿರುವ ‘ಅಭಿನವ ಅರಸು’ ಸಿದ್ದರಾಮಯ್ಯನವರ ಬದುಕು ಮತ್ತು ರಾಜಕಾರಣ ಕೃತಿಯ ಅವಲೋಕನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರ್ನಾಟಕಕ್ಕೆ ಭಾಗ್ಯಗಳನ್ನು ಕೊಟ್ಟ ಮಹನೀಯ ಸಿದ್ದರಾಮಯ್ಯ. ಅರಸು ಇದ್ದ ಕಾಲದ ಸಾಮಾಜಿಕ ಹಿನ್ನೆಲೆಗೂ ಸಿದ್ದರಾಮಯ್ಯ ಅವರ ಕಾಲಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಪ್ರಸ್ತುತ ಕೋಮುವಾದಿ ಭಾವ ಹೆಚ್ಚುತ್ತಿದೆ. ಸ್ವಾರ್ಥದ ರಾಜಕಾರಣ ಹೆಚ್ಚುತ್ತಿದೆ. ಪ್ರಜಾತಂತ್ರದ ವಿರುದ್ಧವಾದ ರಾಜಕೀಯ ನಡೆಯುತ್ತಿದೆ. ಇಂತಹ ಸಂಕೀರ್ಣ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ವ್ಯಕ್ತಿತ್ವವನ್ನು ಹಿಡಿದಿಡುವುದು ನಿಜಕ್ಕೂ ಸವಾಲಿನ ಕೆಲಸ ಎಂದು ತಿಳಿಸಿದರು.
ಸಿದ್ದರಾಮಯ್ಯ ಹೊರ ನೋಟಕ್ಕೆ ಎಲ್ಲರಂತೆ ಸಾಮಾನ್ಯ ವ್ಯಕ್ತಿಯಾದರೂ ಆಂತರಿಕವಾಗಿ ಅವರೊಳಗೆ ಈ ನೆಲದಲ್ಲಿ ತಮ್ಮ ಛಾಪನ್ನು ಬಿಟ್ಟು ಹೋಗಿರುವ ಹಲವಾರು ಚೇತನಗಳ ಒಳಸುಳಿಯನ್ನು ಕಾಣಬಹುದು. ಅವರ ಜೀವನದಲ್ಲಿ ವೈವಿಧ್ಯ ಕ್ಷೇತ್ರಗಳ ಚಿತ್ರಣವಿದೆ. ಬುದ್ಧ, ಬಸವ, ಕನಕ, ಅಂಬೇಡ್ಕರ್, ಲೋಹಿಯಾ, ಕಾರ್ಲ್ ಮಾರ್ಕ್ಸ್, ಕುವೆಂಪು, ದೇವರಾಜ ಅರಸು ಅವರಂತಹ ಮಹನೀಯರ ತತ್ವಾದರ್ಶ ಒಳಗೊಂಡಿರುವ ಮನಸ್ಸು ಇದೆ. ಬಸವಣ್ಣನವರ ಸಮ ಸಂಸ್ಕೃತಿಯ ನೆಲೆಯ ಕಾಯಕತತ್ವ್ವ, ಅಂಬೇಡ್ಕರ್ ಅವರ ಸಮಾನತಾ ತತ್ವ ಸಿದ್ದರಾಮಯ್ಯ ಅವರನ್ನು ಬಹುವಾಗಿ ಕಾಡಿವೆ ಎಂದು ವಿಶ್ಲೇಷಿಸಿದರು.
ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಮಾತನಾಡಿ, ಸಿದ್ದರಾಮಯ್ಯ ಅವರು ನುಡಿದಂತೆ ನಡೆಯುವ ವ್ಯಕ್ತಿ. ಹಸಿವಿನಲ್ಲಿದ್ದವರಿಗೆ ಅನ್ನಭಾಗ್ಯ ಯೋಜನೆ ತಂದರು. ಮಕ್ಕಳಿಗೆ ಕ್ಷೀರಭಾಗ್ಯ, ಸಮವಸ, ಶೂ ಭಾಗ್ಯವನ್ನು ಕೊಟ್ಟರು. ದೇವರಾಜ ಅರಸರು ನನಗೆ ಜೀವನ ಕೊಟ್ಟರು, ಆದರೆ ಸಿದ್ದರಾಮಯ್ಯ ಅವರು ಉನ್ನತ ಸ್ಥಾನಮಾನದ ಜತೆಗೆ ವ್ಯಕ್ತಿತ್ವ ತಂದುಕೊಟ್ಟರು ಎಂದರು.
ಮುಖ್ಯಮಂತ್ರಿ ಕಾರ್ಯಾಲಯದ ಜಂಟಿ ಕಾರ್ಯದರ್ಶಿ ಬಿ. ಶಿವಸ್ವಾಮಿ ಮಾತನಾಡಿ, ಉಳುವವನೆ ಭೂಮಿಯ ಒಡೆಯ ಎಂಬ ಕಾನೂನನ್ನು ದೇವರಾಜ ಅರಸು ಜಾರಿಗೆ ತಂದರು. ಜೀತಪದ್ಧತಿ, ಮಲ ಹೊರುವ ಪದ್ಧತಿ ನಿರ್ಮೂಲನೆ ಮಾಡಲು ಕ್ರಾಂತಿಕಾರಕ ಹೆಜ್ಜೆ ಇಟ್ಟರು. ಅವರ ಹಾದಿಯಲ್ಲೇ ಸಿದ್ದರಾಮಯ್ಯ ಸಾಗುತ್ತಿದ್ದಾರೆ. ಸಾಕಷ್ಟು ಸುಧಾರಣಾ ಕ್ರಮಗಳನ್ನು ಜಾರಿಗೆ ತಂದಿದ್ದಾರೆ ಎಂದರು.
ಸಿಎಂ ಕಾರ್ಯಾಲಯದ ವಿಶೇಷ ಕರ್ತವ್ಯ ಅಧಿಕಾರಿ ಆರ್.ಮಹದೇವ್ ಮಾತನಾಡಿ, ಸಿದ್ದರಾಮಯ್ಯ ಅವರು ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ. ದೇವರಾಜ ಅರಸು ಹಾಗೂ ಸಿದ್ದರಾಮಯ್ಯ ಅವರು ಒಂದು ನಾಣ್ಯದ ಎರಡು ಮುಖಗಳು. ಇಬ್ಬರ ಅಭಿವೃದ್ಧಿ ಕಲ್ಪನೆ ಒಂದೇ ಆಗಿದೆ. ದೀನರ- ಬಡವರ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಕೆ.ಎಸ್.ಶಿವರಾಮು ಮಾತನಾಡಿ, ದೇವರಾಜ ಅರಸು ನಂತರ ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯ, ಬಡವರು ಹಾಗೂ ಶೋಷಿತರ ಪರವಾಗಿ ಗಟ್ಟಿ ಧ್ವನಿಯಲ್ಲಿ ನಿಂತ ಜನನಾಯಕ. ದುರ್ಬಲ ವರ್ಗದವರನ್ನು ಸಮಾಜ ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದಾರೆ. ಅಂತಹ ಮೇರು ವ್ಯಕ್ತಿಗೆ ಬಗ್ಗೆ ಡಾ.ಮಹೇಶ್ ದಳಪತಿ ರಚಿಸಿರುವ ಕೃತಿ ಅರ್ಥಪೂರ್ಣ ಮತ್ತು ಸಕಾಲಿಕವಾಗಿದೆ ಎಂದರು.
ಚಿಂತಕ ಕೆ.ವೈ.ನಾರಾಯಣಸ್ವಾಮಿ, ಪ್ರಾಧ್ಯಾಪಕ ಪ್ರೊ.ಡಿ.ಆನಂದ್, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಪ್ರಗತಿಪರ ಚಿಂತಕ ಅಹಿಂದ ಜವರಪ್ಪ, ಲೇಖಕ ಡಾ. ಮಹೇಶ್ ದಳಪತಿ, ಮೈವಿವಿ ಪರೀಕ್ಷಾಂಗ ಕುಲಸಚಿವ ಡಾ.ನಾಗರಾಜ್ ಇತರರು ಇದ್ದರು.