ಸಿದ್ದರಾಮಯ್ಯ ದೆಹಲಿ ಪ್ರತಿಭಟನೆ ದುರುದ್ದೇಶಪೂರಕ: ಸಿ.ಟಿ.ರವಿ ಆರೋಪ

C.T._Ravi
Published on

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ತಂಡದವರು ದೆಹಲಿಯಲ್ಲಿ ಪ್ರತಿಭಟನೆ ಮಾಡಿದ್ದು ದುರುದ್ದೇಶಕರವಾಗಿದ್ದು, ಈ ಹಿಂದೆ ಮನಮೋಹನ್ ಸಿಂಗ್ ಸರ್ಕಾರದಲ್ಲಿ ರಾಜ್ಯಕ್ಕೆ ಬಂದಿರುವ ಅನುದಾನ ಎಷ್ಟು ಎಂದು ಮಾಜಿ ಸಚಿವ ಸಿ.ಟಿ.ರವಿ ಪ್ರಶ್ನಿಸಿದರು.
ಕೇಂದ್ರ ಅನ್ಯಾಯ ಮಾಡುತ್ತಿದೆ ಎಂದು ಬಿಂಬಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಅವರ ದಿಲ್ಲಿ ಪ್ರತಿಭಟನೆ ದುರುದ್ದೇಶ ಪೂರಕವಾಗಿದ್ದು, ಈ ಹಿಂದೆ ಕೇಂದ್ರದಲ್ಲಿದ್ದ ಮನಮೋಹನ್ ಸಿಂಗ್ ಸರ್ಕಾರದಲ್ಲಿ ರಾಜ್ಯಕ್ಕೆ ಬಂದಿರುವ ಅನುದಾನದ ಬಗ್ಗೆ ಜನರಿಗೆ ತಿಳಿಸಬೇಕು ಎಂದು ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದರು.
ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ 1.42 ಲಕ್ಷ ಕೋಟಿ ರೂ. ಮಾತ್ರ ರಾಜ್ಯಕ್ಕೆ ಅನುದಾನ ಬಂದಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ 10 ವರ್ಷದಲ್ಲಿ ರಾಜ್ಯಕ್ಕೆ 4.91 ಲಕ್ಷ ಕೋಟಿ ರೂ. ಅನುದಾನ ಬಂದಿದೆ. ಈ ವಿಷಯವೂ ಚರ್ಚೆಯಾಗಿದ್ದು, ಕೇಂದ್ರದಿಂದ ರಾಜ್ಯಕ್ಕೆ ಬಂದಿರುವ ಅನುದಾನದ ವಸ್ತುಸ್ಥಿತಿಯನ್ನು ಜನರ ಮುಂದಿಡಬೇಕು ಎಂಬ ತೀರ್ಮಾನವಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ 28 ಸ್ಥಾನ ಗೆಲ್ಲಲು ಏನು ತಂತ್ರಗಾರಿಗೆ ಮಾಡಬೇಕು ಎನ್ನುವುದು ಕೂಡ ಚರ್ಚೆಯಾಗಿದ್ದು, ರಾಜ್ಯ ಸರ್ಕಾರದ ವೈಫಲ್ಯ ಮುಚ್ಚಲು ಕೇಂದ್ರದ ಮೇಲೆ ಸುಳ್ಳು ಆರೋಪ ಮಾಡುತ್ತಿದೆ. ಜತೆಗೆ ನಾನು ಹೇಳಿದ ಅಂಕಿ-ಅಂಶ ಸುಳ್ಳಾದರೆ ರಾಜಕೀಯ ನಿವೃತ್ತಿ ಎಂಬ ಹೇಳಿಕೆಯನ್ನೂ ಸಿದ್ದರಾಮಯ್ಯ ನೀಡಿದ್ದಾರೆ. ಆದರೆ ಅವರ ರಾಜಕೀಯ ಜೀವನ ಮುಗಿಯುವ ಹಂತಕ್ಕೆ ಬಂದಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಅವರು ಆ ಹೇಳಿಕೆ ಕೊಟ್ಟಿದ್ದಾರೆ ಅಷ್ಟೇ. ಅವರಿಗೆ ಅವರ ರಾಜಕೀಯದ ವಾಸ್ತವ ಸ್ಥಿತಿ ಅರಿವಿಗೆ ಬಂದಂತಿದೆ ಎಂದು ತಿರುಗೇಟು ನೀಡಿದರು.
ಜೆಡಿಎಸ್ ಅನ್ನು ಎಲ್ಲ ರೀತಿಯಿಂದಲೂ ನಾವು ಗೌರವದಿಂದ ಕಾಣುತ್ತೇವೆ. ನಮ್ಮ ಮೈತ್ರಿಗೆ ಯಾವುದೇ ಧಕ್ಕೆ ಆಗದಂತೆ ನಾವು ನಡೆದುಕೊಳ್ಳುತ್ತೇವೆ. ಕಾಂಗ್ರೆಸ್ ರಾಜಕೀಯ ದುರುದ್ದೇಶದಿಂದ ದಕ್ಷಿಣ ರಾಜ್ಯಗಳನ್ನು ಎತ್ತಿಕಟ್ಟುತ್ತಿದೆ. ಈಗ ಗುತ್ತಿಗೆದಾರ ಕೆಂಪಣ್ಣ ಅವರು ಈಗಲೂ ಮುಂದೆ ಬಂದು 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದಾರೆ. ಅದರ ಬಗ್ಗೆ ಕಾಂಗ್ರೆಸ್ ನಾಯಕರು ಏನು ಹೇಳುತ್ತಾರೆ ಎಂದು ಕಿಡಿಕಾರಿದರು.
ಸಿಎಂ ಸಿದ್ದರಾಮಯ್ಯ ಬದಲಾಗಿದ್ದು, ಈ ಮೊದಲು ಜನರು ಏನು ತಿಳಿದುಕೊಳ್ಳುತ್ತಾರೋ ಎಂದು ನಡೆದುಕೊಳ್ಳುತ್ತಿದ್ದರು. ಆದರೆ ಈ ಬಾರಿ ಡಿ.ಕೆ. ಶಿವಕುಮಾರ್ ಜತೆ ಸ್ಪರ್ಧೆಗೆ ಬಿದ್ದಿದ್ದಾರೆ. ನನ್ನದು ಫೈನಲ್ ಆಟ, ಇನ್ನೇನು ಉಳಿದಿಲ್ಲ, ಆಡೋದು ಆಡೋಣ ಎನ್ನುವ ನಡವಳಿಕೆ ಅವರಲ್ಲಿ ಕಾಣುತ್ತಿದೆ ಎಂದು ಆರೋಪಿಸಿದರು.
ಡಿಕೆಗಿಂತ ನಾನು ಒಂದು ಕೈ ಮೇಲು ಎನ್ನುವುದನ್ನು ತೋರಿಸಲು ಮುಂದಾಗಿದ್ದಾರೆ. 40 ಪರ್ಸೆಂಟ್ ಜತೆಗೆ ವರುಣ ಟ್ಯಾಕ್ಸ್ ಹಾಗೂ ಕನಕಪುರ ಟ್ಯಾಕ್ಸ್‌ಗಳು ಕೂಡ ಸೇರಿಕೊಂಡಿದ್ದು, ಇದೆಲ್ಲದರಿಂದ ರಾಜ್ಯ ಖಜಾನೆ ದಿವಾಳಿ ಮಾಡಿದ್ದಾರೆ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net