

ಹುಬ್ಬಳ್ಳಿ : ಐದು ವರ್ಷಗಳ ಅವಧಿವರೆಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುತ್ತಾರೆಂದು ಡಿಸಿಎಂ ಡಿ.ಕೆ. ಶಿವಕುಮಾರ ಬಹಿರಂಗವಾಗಿ ಹೇಳಲಿ. ಇಲ್ಲದಿದ್ದರೆ ನಾಯಕತ್ವ ಬದಲಾವಣೆಯ ಕಸರತ್ತು ನಡೆಯುತ್ತಿದೆ ಎಂಬಂತಾಗುತ್ತದೆ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶೆಟ್ಟರ್, ನವೆಂಬರ್ ಅಂತ್ಯದಲ್ಲಿ ರಾಜಕೀಯ ಬದಲಾವಣೆ ಖಚಿತ. ಇದೇ ರೀತಿ ಮುಂದುವರಿದರೆ ಸರ್ಕಾರ ಪತನಗೊಳ್ಳುವ ಸಾಧ್ಯತೆಯೂ ಇದೆ. ನವೆಂಬರ್ನಲ್ಲಿ ಕ್ರಾಂತಿ ಆಗುತ್ತದೆಯೋ ಅಥವಾ ಭ್ರಾಂತಿಯಾಗುತ್ತದೆಯೋ ಗೊತ್ತಿಲ್ಲ. ಆದರೆ, ಏನೋ ಒಂದು ಆಗುವುದಂತೂ ಖಚಿತ ಎಂದರು.
ಕಬ್ಬು ಬೆಳೆಗಾರರ ಕಿಚ್ಚು ತಾತ್ಕಾಲಿಕವಾಗಿ ಮಾತ್ರ ಶಮನಗೊಂಡಿದೆ. ಮತ್ತೆ ಯಾವಾಗ ಬೇಕಾದರೂ ಹೋರಾಟ ನಡೆಯಬಹುದು. ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಲೇ ಈ ಸಮಸ್ಯೆ ಉದ್ಭವಿಸಿದ್ದು. ನಾನು ಸಕ್ಕರೆ ಸಚಿವನಾಗಿದ್ದಾಗ ಹಾಗೂ ಮುಖ್ಯಮಂತ್ರಿಯಾಗಿದ್ದಾಗ ಮುಂಚಿತವಾಗಿಯೇ ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರನ್ನು ಕರೆಯಿಸಿ ಮಾತನಾಡಿದ್ದೆ. ಸಕ್ಕರೆ ಸಚಿವರಿಗೆ ಎಲ್ಲವೂ ಗೊತ್ತಿರುತ್ತದೆ. ಅವರು ಮುಖ್ಯಮಂತ್ರಿ ಗಮನಕ್ಕೆ ತಂದು, ರೈತರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಮುಂಚಿತವಾಗಿಯೇ ಮಾಡಬೇಕಿತ್ತು ಎಂದರು.
ಸರ್ಕಾರ ಬೆಂಬಲ ಬೆಲೆ ಘೋಷಿಸಿದ್ದರೂ ಇದುವರೆಗೆ ಲಿಖಿತ ಆದೇಶ ಬಂದಿಲ್ಲ. ಕಾರ್ಖಾನೆಗಳ ಮಾಲೀಕರು ರೈತರಿಗೆ ನಿಗದಿತ ಬೆಲೆ ನೀಡದಿದ್ದರೆ ಮುಖ್ಯಮಂತ್ರಿ ವಸೂಲಿ ಮಾಡಿ ಕೊಡುತ್ತಾರಾ ? ಎಂದು ಪ್ರಶ್ನಿಸಿದರು.