

ಮೈಸೂರು: ಸಿದ್ದರಾಮಯ್ಯ ಮುಖ್ಯಮಂತ್ರಿ ಅದಾಗಲೆಲ್ಲ ಅರಮನೆ ವಿಚಾರದಲ್ಲಿ ಗೊಂದಲ ಮೂಡಿಸುತ್ತಾರೆ ಎಂದು ವಿಧಾನ ಪರಿಷತ್ತಿನ ಸದಸ್ಯ ಎಚ್.ವಿಶ್ವನಾಥ್ ಟೀಕಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಅದಾಗಲೆಲ್ಲ ತೀಟೆ ಮಾಡುವುದು, ಅನವಶ್ಯಕ ಕಿರುಕುಳ ನೀಡುವುದು, ರಸ್ತೆಗೆ ಇರುವ ರಾಜರ ಹೆಸರು ತೆಗೆಯುವುದು, ಮಹಾರಾಜರ ಬಗ್ಗೆ ಲಘುವಾಗಿ ಮಾತನಾಡುವುದು, ಕೆಣಕುವುದು ಮಾಡುತ್ತಾರೆ. ಇದು ಸರಿಯಲ್ಲ ಎಂದು ಪ್ರತಿಕ್ರಿಯಿಸಿದರು.
ಅರಮನೆ ಸಂಬಂಧ ಸುಗ್ರೀವಾಜ್ಞೆ ಹೊರಡಿಸುವ ಬದಲು ರಾಜವಂಶಸ್ಥರ ಜತೆ ಮಾತನಾಡಿ ಒಂದು ನಿರ್ಣಯ ಕೈಗೊಳ್ಳಬಹುದಿತ್ತು. ಆದರೆ ಅಧಿಕಾರ ಇದೆ ಎಂದು ಸುಗ್ರೀವಾಜ್ಞೆ ತರುವುದು ಸರಿಯಲ್ಲ ಎಂದು ಕಿಡಿಕಾರಿದರು.
ನ್ಯಾಯಾಲಯದ ಆದೇಶ ಪಾಲನೆ ಮಾಡದೆ, ನಾನು ಪ್ರಜಾಪ್ರಭುತ್ವವಾದಿ ಎಂದು ತೋರಿಸಿಕೊಳ್ಳಲು ಸಿದ್ದರಾಮಯ್ಯ ಇದನ್ನೆಲ್ಲ ಮಾಡುತ್ತಿದ್ದಾರೆ. ಈ ರೀತಿ ಅವರು ನಡೆದುಕೊಳ್ಳಬಾರದು. ಅವರಿಗೆ ಅದು ಶೋಭೆ ಅಲ್ಲ ಎಂದರು.
ಲೋಕಾಯುಕ್ತ ಸರ್ಕಾರದ ಕೈಗೊಂಬೆಯಾಗಿದೆ. ಲೋಕಾಯುಕ್ತರಿಗೆ ಸ್ಥಳ ನಿಯುಕ್ತಿಗೊಳಿಸುವುದು ಸರ್ಕಾರ. ಹೀಗಾಗಿ ಅಧಿಕಾರಿಗಳು ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಾರೆ. ಇಡೀ ದೇಶದಲ್ಲೇ ಇಂತಹ ದೊಡ್ಡ ಹಗರಣವಾಗಿಲ್ಲ. ಮೈಸೂರಿನವರೇ ಮುಖ್ಯಮಂತ್ರಿ ಆಗಿರುವಾಗ ಇಲ್ಲೇ ಹಗರಣವಾಗಿದೆ ಎಂದರು.
ಲೋಕಾಯುಕ್ತರು ಯಾವುದನ್ನೂ ಸರಿಯಾಗಿ ಪರಾಮರ್ಶೆ ಮಾಡಿಲ್ಲ. ಮುಖ್ಯಮಂತ್ರಿ ಸುದ್ದಿಗೋಷ್ಠಿ ನಡೆಸುವಾಗ ಸಚಿವ ಭೈರತಿ ಸುರೇಶ್ ತಮ್ಮದೇ ಲೆಕ್ಕಾಚಾರ ಕೊಡುತ್ತಾರೆ. ಇದನ್ನೇಕೆ ಲೋಕಾಯುಕ್ತ ಗಂಭೀರವಾಗಿ ತೆಗೆದುಕೊಂಡಿಲ್ಲ? ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಯಾವುದೇ ಶಾಸಕರ ಹಿಂಬಾಲಕರಾಗಬಾರದು ಎಂದರು.
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಾಗಿದ್ದು, ಜನರು ತೊಂದರೆ ಅನುಭವಿಸುತ್ತಿದ್ದಾರೆ. ಆದರೂ ಪೊಲೀಸರು ಅದನ್ನು ನಿಯಂತ್ರಿಸಲು ನಿಷ್ಕ್ರಿಯವಾಗಿದ್ದಾರೆ ಎಂದು ದೂಷಿಸಿದರು.
ವರ್ಗಾವಣೆಯಲ್ಲಿ ದಂಧೆ ನಡೆಯುತ್ತಿದ್ದು, ಹುದ್ದೆಗೆ ಇಂತಿಷ್ಟು ಎಂದು ಹಣ ನೀಡಬೇಕಿದೆ. ಗೃಹ ಸಚಿವರಾಗಿದ್ದರೂ ಡಾ.ಜಿ.ಪರಮೇಶ್ವರ್ ಅವರಿಗೆ ಕೇವಲ ಸಬ್ ಇನ್ಸ್‌ಸ್ಪೆಕ್ಟರ್‌ಗಳನ್ನು ಮಾತ್ರ ವರ್ಗಾವಣೆ ಮಾಡುವ ಅಧಿಕಾರ ನೀಡಲಾಗಿದೆ. ಉಳಿದಂತೆ ಎಲ್ಲವನ್ನು ಮುಖ್ಯಮಂತ್ರಿಗಳೇ ನಿಭಾಯಿಸುತ್ತಿದ್ದು, ಗೃಹ ಸಚಿವರನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಅವರನ್ನು ಮೆಚ್ಚಿಸುತ್ತಿದ್ದಾರೆ: ಮುಡಾ ನಿವೇಶನ ಹಗರಣದಿಂದ ತಪ್ಪಿಸಿಕೊಳ್ಳಲು ಶಾಸಕ ಜಿ.ಟಿ.ದೇವೇಗೌಡ, ಸಿದ್ದರಾಮಯ್ಯ ಅವರನ್ನು ಮೆಚ್ಚಿಸೋಕೆ ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಎಲ್ಲರಿಗೂ ಬೈಯುತ್ತಿದ್ದಾರೆ. ಯಾರು, ಯಾವ ಪಕ್ಷ ಬಿಟ್ಟರೂ ಏನು ಆಗಲ್ಲ. ಪಕ್ಷ ಎಂದರೆ ಜನ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಬಿಜೆಪಿ ರಾಜ್ಯ ಅಥವಾ ಸ್ಥಳೀಯ ನಾಯಕರು ನನ್ನನ್ನು ಯಾವ ಸಭೆಗೂ ಕರೆಯುವುದಿಲ್ಲ. ಹಾಗಾಗಿ ದೂರು ಉಳಿದಿದ್ದೇನೆ. ರಾಜಕೀಯದಿಂದ ನಿವೃತ್ತಿ ಪಡೆಯುವುದಿಲ್ಲ ಎಂದ ಅವರು, ರೆಡ್ಡಿ ಹಾಗೂ ಶ್ರೀರಾಮುಲು ಅವರ ಮಧ್ಯೆ ಈಗ ವೈಮನಸ್ಸು ಶುರುವಾಗಿದೆ. ವಾಲ್ಮೀಕಿ ಹಾಗೂ ಹಿಂದುಳಿದ ಜನಾಂಗ ಹೆಚ್ಚಾಗಿರುವ ಬಳ್ಳಾರಿಯಲ್ಲಿ ರೆಡ್ಡಿ ಅವರನ್ನು ಗೆಲ್ಲಿಸಿದ್ದು ಯಾರು ಎನ್ನುವುದು ಜನರಿಗೆ ತಿಳಿದಿದೆ ಎಂದು ಹೇಳಿದರು.