

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಕಿಸ್ತಾನದ ಏಜೆಂಟ್ನಂತೆ ವರ್ತಿಸುತ್ತಿದ್ದಾರೆ. ಅವರು ಪಾಕಿಸ್ತಾನಕ್ಕೆ ಹೋಗಿ ಅಲ್ಲಿನ ಪ್ರಧಾನಿ ಆಗಲಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಟೀಕಿಸಿದ್ದಾರೆ.
ನಗರದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದ ಮಾಧ್ಯಮಗಳು ಸಹ ಸಿದ್ದರಾಮಯ್ಯ ಅವರನ್ನು ಹೊಗಳುತ್ತಿವೆ. ಸಿದ್ದರಾಮಯ್ಯ ಸಹ ಮುಸ್ಲಿಮರ ಟೋಪಿಯನ್ನು ಖುಷಿಯಿಂದಲೇ ಧರಿಸುತ್ತಾರೆ. ಅವರು ಕುಂಕುಮ, ಭಂಡಾರ ಹಚ್ಚುವುದೇ ಇಲ್ಲ ಎಂದರು.
ಕಾಂಗ್ರೆಸ್ ಹಿಂದುಗಳ ಪಾರ್ಟಿ ಅಲ್ಲ. ಅದು ಹುಟ್ಟಿದ್ದೇ ಮುಸ್ಲಿಮರಿಗಾಗಿ. ಮುಸ್ಲಿಮರು ಎಲ್ಲಿಯವರೆಗೆ ಭಾರತದಲ್ಲಿ ಇರುತ್ತಾರೋ ಅಲ್ಲಿಯವರೆಗೆ ಅವರು ಕಲ್ಲು ಹೊಡೆಯುವವರೇ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ಗೆ ಇಲ್ಲ. ಸಚಿವ ಸಂತೋಷ ಲಾಡ್ ಅವರು ಪ್ರಧಾನಿ ಮೋದಿ ಮುಂದೆ ಬಚ್ಚಾ ಅಷ್ಟೇ. ರಾಹುಲ್ ಗಾಂಧಿಯನ್ನು ಖುಷಿಪಡಿಸಲು ಹಾಗೂ ಮಂತ್ರಿ ಸ್ಥಾನ ಉಳಿಸಿಕೊಳ್ಳಲು ಸಚಿವ ಸಂತೋಷ ಲಾಡ್ ಅವರು ಮೋದಿ ವಿರುದ್ಧ ಮಾತನಾಡುತ್ತಾರೆ ಎಂದು ಟೀಕಿಸಿದರು.
ರೈಲ್ವೆ ಪರೀಕ್ಷೆಯಲ್ಲಿ ಮಂಗಳಸೂತ್ರ ನಿಷೇಧ ವಿಚಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಯತ್ನಾಳ, ಮಂಗಳಸೂತ್ರ ನಿಷೇಧಿಸಿದವರನ್ನು ವಜಾ ಮಾಡಬೇಕು ಎಂದರು.
ಅಧಿವೇಶನದಲ್ಲಿ ಬಿಜೆಪಿ ಶಾಸಕರು ಗಲಭೆ ಮಾಡಲು ಕಾರಣ ಪಕ್ಷದ ಅಧ್ಯಕ್ಷ ವಿಜಯೇಂದ್ರ ಅವರ ಸೂಚನೆ. ವಿಜಯೇಂದ್ರ ಬಗ್ಗೆ ಬಿಜೆಪಿಯಲ್ಲಿ ಅಸಮಾಧಾನ ಇದೆ. ಅಪ್ರಬುದ್ಧ ವ್ಯಕ್ತಿಯನ್ನು ಅಧ್ಯಕ್ಷನನ್ನಾಗಿ ನೇಮಿಸಿದ್ದೇ ತಪ್ಪು ಎಂದು ಹೇಳಿದರು.
ಸದನದ ಬಾವಿಯಲ್ಲಿ ಮಾತ್ರ ಹೋರಾಟ ಮಾಡಬೇಕು. ಸಭಾಧ್ಯಕ್ಷರ ಕುರ್ಚಿ ಬಳಿ ತೆರಳಿ ಗಲಭೆ ಮಾಡಿದ್ದು ತಪ್ಪು. ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಿರುವುದರಿಂದ ಸದನದಿಂದ ಉಚ್ಚಾಟಿಸಿರುವ ಆದೇಶ ನನಗೆ ಅನ್ವಯಿಸುವುದಿಲ್ಲ ಎಂದು ತಿಳಿಸಿದರು.
ಪಾಕಿಸ್ತಾನ ಸರ್ವನಾಶ : ಭಾರತಕ್ಕೆ ಪಾಕಿಸ್ತಾನ ಅಣುಬಾಂಬ್ ಬೆದರಿಕೆ ಹಾಕುತ್ತಿರುವುದು ಹಾಸ್ಯಾಸ್ಪದವಾಗಿದೆ. ನಮ್ಮಲ್ಲಿರುವ ಅಣುಬಾಂಬ್ಗಳು ಪಟಾಕಿ ಹಚ್ಚಲು ಇಲ್ಲ. ನಮ್ಮಲ್ಲಿನ ನಾಲ್ಕು ಅಣುಬಾಂಬ್ ಹಾಕಿದರೆ ಸಾಕು, ಪಾಕಿಸ್ತಾನ ಸರ್ವನಾಶವಾಗುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಭಾರತದ ಶಕ್ತಿಯನ್ನು ಯಾರೂ ಹಗುರವಾಗಿ ಪರಿಗಣಿಸಬಾರದು. ಈ ಬಾರಿ ಪಾಕಿಸ್ತಾನದ ಅಂತ್ಯವಾಗಬೇಕು. ಭಾರತ ಒಳಗಿನಿಂದ ಮತ್ತು ಹೊರಗಿನಿಂದ ವೈರಿಗಳನ್ನು ಎದುರಿಸಬೇಕಿದೆ. ಒಂದು ವೇಳೆ ಯುದ್ಧವಾದರೆ ಪಾಕಿಸ್ತಾನದ ಅಸಲಿಯತ್ತು ಹೊರಗೆ ಬರುತ್ತೆ ಎಂದ ಯತ್ನಾಳ, ಹಿಂದು ಪಕ್ಷ ಕಟ್ಟುವ ವಿಚಾರ ಸದ್ಯಕ್ಕೆ ಇಲ್ಲ. ಈ ಬಗ್ಗೆ ಮುಂದೆ ನೋಡೋಣ ಎಂದು ಹೇಳಿದರು.