ವರ್ಷಾಂತ್ಯಕ್ಕೆ ಸಿಎಂ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ ಸಿದ್ದರಾಮಯ್ಯ: ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್

05 H.VISHVANATH-1
ಎಚ್.ವಿಶ್ವನಾಥ್
Published on

ಮೈಸೂರು: ವರ್ಷಾಂತ್ಯದಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವ ಸಿದ್ದರಾಮಯ್ಯ ಅವರು ಹೇಗೆ ಜಾತಿ ಜನಗಣತಿ ಮಾಡಿಸುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಪ್ರಶ್ನಿಸಿದರು.

ಹತ್ತು ವರ್ಷದ ಹಿಂದೆಯೇ ಮುಖ್ಯಮಂತ್ರಿ ಆಗಿದ್ದಾಗ ಸಿದ್ದರಾಮಯ್ಯ ಅವರು ಜಾತಿವಾರು ಜನಗಣತಿ ಮಾಡಿಸಿದ್ದರು. ಒಂದೂವರೆ ಲಕ್ಷ ಶಿಕ್ಷಕರು 2 ವರ್ಷ ಗಣತಿ ಮಾಡಿದ್ದರು. ಅದಕ್ಕಾಗಿ 170 ಕೋಟಿ ರೂ. ಅಧಿಕ ಹಣ ಖರ್ಚಾಗಿತ್ತು. ಆಗಿನ ಕಾಲದಿಂದಲೂ ವರದಿ ಬಹಿರಂಗ ಮಾಡದೇ ಹಾಗೆಯೇ ಇಟ್ಟುಕೊಂಡಿದ್ದರು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ಇದೀಗ ಹೈಕಮಾಂಡ್‌ಗೆ ಹೆದರಿಕೊಂಡು ಮತ್ತೆ ಜಾತಿ ಜನಗಣತಿ ಮಾಡಿರುವುದಾಗಿ ಹೇಳಿದ್ದಾರೆ. ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ಸಿದ್ದರಾಮಯ್ಯ ಇಳಿಯುತ್ತಾರೆ. ಡಿ.ಕೆ.ಶಿವಕುಮಾರ್ ಅಥವಾ ಮಲ್ಲಿಕಾರ್ಜುನ ಖರ್ಗೆ ಅವರಲ್ಲಿ ಒಬ್ಬರು ಮುಖ್ಯಮಂತ್ರಿ ಆಗುತ್ತಾರೆ. ಹಾಗಾಗಿ ಜಾತಿ ಜನಗಣತಿಯನ್ನು ಸಿದ್ದರಾಮಯ್ಯ ಬಹಿರಂಗ ಮಾಡಲು ಆಗುವುದಿಲ್ಲ ಎಂದು ಹೇಳಿದರು.

ಜಾತಿ ಜನಗಣತಿ ಮಾಡಲು ಶಿಕ್ಷಕರು ಬೇಕು. ಈಗ ತಾನೇ ಶಾಲೆಗಳು ಪ್ರಾರಂಭವಾಗಿರುವುದರಿಂದ ಶಿಕ್ಷಕರು ಲಭ್ಯವಾಗುವುದಿಲ್ಲ. ಸಿದ್ದರಾಮಯ್ಯ ಹಾವಾಡಿಗನ ರೀತಿ ಈಗ ಮತ್ತೆ ಜಾತಿ ಜನಗಣತಿ ಮಾಡಿಸುವುದಾಗಿ ಹೇಳುತ್ತಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಆಗುವುದರಿಂದ ಅದು ಹೇಗೆ ಜಾತಿ ಜನಗಣತಿ ಮಾಡಿಸುತ್ತೀರಿ? ಹೈಕಮಾಂಡ್ ಮೆಚ್ಚಿಸುವ ಬದಲು ಮರು ಜಾತಿ ಜನಗಣತಿ ಮಾಡಿಸುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದರೆ ಸಿದ್ದರಾಮಯ್ಯ ಹೀರೋ ಆಗುತ್ತಿದ್ದರು ಎಂದರು.

ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಿರುವ ಸಿದ್ದರಾಮಯ್ಯ ಅವರನ್ನು ಡಿ.ದೇವರಾಜ ಅರಸು ಅವರಿಗೆ ಹೋಲಿಕೆ ಮಾಡಬೇಡಿ ಎಂದು ಹೇಳಿದರು.

ಸಿದ್ದರಾಮಯ್ಯ ಪ್ರಾಮಾಣಿಕತೆ ಇಲ್ಲದೆ, ಸುಳ್ಳು ಹೇಳಿಕೊಂಡು ಓಡಾಡುತ್ತಿರುವವರು ಎಂದು ಚರಿತ್ರೆಯಲ್ಲಿ ದಾಖಲಾಗುತ್ತಾರೆ. 170 ಕೋಟಿ ರೂ.ಗೂ ಹೆಚ್ಚು ಹಣ ಖರ್ಚು ಮಾಡಿ ಜಾತಿ ಜನಗಣತಿ ಮಾಡಿಸಿದ ವರದಿಯನ್ನು ತಿಪ್ಪೆಗೆ ಎಸೆದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಡಿ.ಕೆ.ಶಿವಕುಮಾರ್ ಎಲ್ಲವನ್ನೂ ಕೆಡಿಸಿಬಿಟ್ಟರು. ಡಿ.ಕೆ.ಶಿವಕುಮಾರ ಮುಖ್ಯಮಂತ್ರಿ ಆಗಲಿ ಎಂದುಕೊಂಡಿದ್ದೇನೆ. ಆದರೆ ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಡಿ.ಕೆ.ಶಿವಕುಮಾರ್ ನಡೆದುಕೊಂಡ ರೀತಿ ಸರಿ ಇರಲಿಲ್ಲ. ಆರ್‌ಸಿಬಿಯಲ್ಲಿ ಕರ್ನಾಟಕದ ಆಟಗಾರರೇ ಇಲ್ಲ. ಆರ್‌ಸಿಬಿಗೂ ನಮ್ಮ ರಾಜ್ಯಕ್ಕೂ ಸಂಬಂಧವೇ ಇಲ್ಲ. ಇನ್ನು ಕಾಲ್ತುಳಿತ ಘಟನೆ ಸಂಬಂಧ ಸಿದ್ದರಾಮಯ್ಯ ನೀಡಿದ ಹೇಳಿಕೆಗಳು ವೈರುಧ್ಯದಿಂದ ಕೂಡಿವೆ ಎಂದು ಕಿಡಿಕಾರಿದರು.

ಚಿನ್ನಸ್ವಾಮಿ ಸ್ಟೇಡಿಯಂ ಬಳಿ 3.30ಕ್ಕೆ ಕಾಲ್ತುಳಿತ ಆದರೂ ಸಂಜೆ 5.30 ಕ್ಕೆ ಗೊತ್ತಾಯಿತು. ವಿಧಾನಸೌಧ ಕಾರ್ಯಕ್ರಮಕ್ಕೂ, ಚಿನ್ನಸ್ವಾಮಿ ಕ್ರೀಡಾಂಗಣ ಕಾರ್ಯಕ್ರಮಕ್ಕೂ ಸಂಬಂಧವಿಲ್ಲ. ರಾಜ್ಯಪಾಲರನ್ನು ಆಹ್ವಾನಿಸಿರಲಿಲ್ಲ ಎಂದೆಲ್ಲ ವ್ಯತಿರಿಕ್ತ ಹೇಳಿಕೆಯನ್ನು ಸಿದ್ದರಾಮಯ್ಯ ನೀಡಿದ್ದರು. ಆ ಬಳಿಕ ರಾಜ್ಯಪಾಲರನ್ನು ಆಹ್ವಾನಿಸಿದ್ದು ನಾನೇ ಎಂದು ಹೇಳಿದ್ದಾರೆ. ಇವರ ತಪ್ಪು ಇಲ್ಲದಿದ್ದರೆ ಗೋವಿಂದರಾಜು ಅವರನ್ನು ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ಏಕೆ ತೆಗೆದರು ಎಂದು ಹೇಳಬೇಕು? ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net