

ಹುಬ್ಬಳ್ಳಿ : ತಮ್ಮ ಉತ್ತರಾಧಿಕಾರಿಯಾಗಿ ಸತೀಶ ಜಾರಕಿಹೊಳಿ ಹೆಸರು ತೇಲಿಬಿಡುವ ಮೂಲಕ ಡಿ.ಕೆ. ಶಿವಕುಮಾರ ಅವರನ್ನು ಮುಖ್ಯಮಂತ್ರಿ ಮಾಡಲು ಬಿಡುವುದಿಲ್ಲವೆಂದು ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಹೈಕಮಾಂಡ್ಗೆ ಸವಾಲು ಹಾಕಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿಶ್ಲೇಷಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ನಡೆಯಬೇಕಿದ್ದ ಕ್ರಾಂತಿ ನವೆಂಬರ್ಗೆ ಮುಂದೂಡಿಕೆಯಾಗಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಅಸ್ಥಿರತೆ ಮೂಡಿದೆ ಎಂದರು.
ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ರಾಜ್ಯ ಸರ್ಕಾರ ಭರ್ತಿ ಮಾಡುತ್ತಿಲ್ಲ. ಆರ್ಥಿಕವಾಗಿ ಸರ್ಕಾರ ದಿವಾಳಿಯಾಗಿರುವುದೇ ಇದಕ್ಕೆ ಕಾರಣ. ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವ ಕಾಂಗ್ರೆಸ್, ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಲೂ ಆಗದ ಸ್ಥಿತಿಯಲ್ಲಿ ಇದೆ ಎಂದು ಟೀಕಿಸಿದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಕೊಡಬೇಕಿದ್ದ 350 ಕೋಟಿ ರೂ. ಬಾಕಿ ಹಣವನ್ನು ಇದುವರೆಗೂ ಪಾವತಿಸಿಲ್ಲ. ಹು-ಧಾ ಪಾಲಿಕೆ ತನ್ನ ಮೂಲದಿಂದಲೇ ಪ್ರತಿ ವರ್ಷ 7 ಕೋಟಿ ರೂ. ಹಣವನ್ನು ಸಂಬಳಕ್ಕಾಗಿ ವ್ಯಯಿಸುವಂಥ ಪರಿಸ್ಥಿತಿಯನ್ನು ಸರ್ಕಾರ ತಂದಿಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅತಿ ಹೆಚ್ಚು ಬಜೆಟ್ ಮಂಡಿಸಿದವರೆಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾರ್ವಜನಿಕ ಜೀವನದಲ್ಲಿ ಹೇಗಿರಬೇಕೆಂಬ ಸಾಮಾನ್ಯ ಜ್ಞಾನವೂ ಇಲ್ಲ. ರಾಷ್ಟ್ರಪತಿ, ಪ್ರಧಾನಿ ಅವರನ್ನು ಏಕ ವಚನದಲ್ಲಿಯೇ ಕರೆಯುತ್ತ, ಅದು ತಮ್ಮ ಗ್ರಾಮ್ಯ ಭಾಷೆ ಎಂಬ ಸ್ಪಷ್ಟೀಕರಣ ಕೊಡುತ್ತಾರೆ. ಹಾಗಾದರೆ, ಸೋನಿಯಾ ಗಾಂಧಿ ಅವರನ್ನು ಸಹ ಏಕ ವಚನದಲ್ಲಿಯೇ ಕರೆಯಲಿ ನೋಡೋಣ ಎಂದು ಸವಾಲು ಹಾಕಿದರು.
ವೀರೇಂದ್ರ ಪಾಟೀಲ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಂದಿನ ಪ್ರಧಾನಿ ರಾಜೀವ ಗಾಂಧಿ ಅವರು ಸೂಚಿಸಿದ್ದ ಕೆಲವು ತಪ್ಪು ಆದೇಶ ಪಾಲಿಸಿರಲಿಲ್ಲ. ಇದೇ ಕಾರಣಕ್ಕಾಗಿ ಪಾಟೀಲ ಅವರು ವಿಮಾನ ನಿಲ್ದಾಣದಲ್ಲಿದ್ದಾಗಲೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಲಾಗಿತ್ತು. ಈ ರೀತಿಯ ಕಾಂಗ್ರೆಸ್ ದರ್ಬಾರ್ನಲ್ಲಿ ಸಿದ್ದರಾಮಯ್ಯ ಅವರು ಸೋನಿಯಾ ಗಾಂಧಿಗೆ ಏಕವಚನದಲ್ಲಿ ಮಾತನಾಡಿದರೆ ಎರಡೇ ದಿನದಲ್ಲಿ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ. ಹಾಗಾಗಿ ಅವರ ವಿಷಯದಲ್ಲಿ ಇವರ ಗ್ರಾಮ್ಯ ಭಾಷೆ ಬಳಕೆಯಾಗುವುದಿಲ್ಲ ಎಂದು ತಿವಿದರು.
ಸಂಸದ ತೇಜಸ್ವಿ ಸೂರ್ಯ ಅವರನ್ನು ಮನಬಂದಂತೆ ಕರೆಯುವ ಸಿದ್ದರಾಮಯ್ಯ, ಒಬ್ಬ ಸಂಸದನಿಗೆ ಯಾವ ರೀತಿ ಮರ್ಯಾದೆ ಕೊಡಬೇಕೆಂಬ ಸೌಜನ್ಯತೆಯೂ ಇಲ್ಲದವರು. ಮಾಜಿ ಪ್ರಧಾನಿ ದಿ. ಜವಾಹರಲಾಲ್ ನೆಹರು ಅವರು ಸಹ ಈ ರೀತಿ ಮಾತನಾಡಿರಲಿಲ್ಲ. ಸಿದ್ದರಾಮಯ್ಯ ಅಮವಾಸ್ಯೆಯ ರಾತ್ರಿಯಲ್ಲಿ ಚಂದ್ರನನ್ನು ನೋಡಿದಂತೆ ಮಾತನಾಡುತ್ತಾರೆ ಎಂದು ಛೇಡಿಸಿದರು.
ಈಗಾಗಲೇ ದೇಶದ ಜನರು ಕಾಂಗ್ರೆಸ್ಅನ್ನು ಮೂಲೆಯಲ್ಲಿ ಕೂರಿಸಿದ್ದಾರೆ. ಕರ್ನಾಟಕದಲ್ಲಿ ಅಧಿಕಾರದಲ್ಲಿ ಇದ್ದೇವೆಂದು ಇವರು ಹಾರಾಡುತ್ತಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಕಾಂಗ್ರೆಸ್ ಕಾಣದಂತೆ ಮಾಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಶಾಸಕ ಮಹೇಶ ಟೆಂಗಿನಕಾಯಿ, ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ ಇದ್ದರು.