

ಮೈಸೂರು: ರಾಜ್ಯದಲ್ಲಿ ಜನಪರವಾದ ಹಾಗೂ ಭ್ರಷ್ಟಾಚಾರ ರಹಿತವಾದ ಆಡಳಿತ ನೀಡುತ್ತಿರುವ ಬಿಜೆಪಿ ಸರ್ಕಾರ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನಗಳನ್ನು ಪಡೆದು ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭವಿಷ್ಯ ನುಡಿದರು.
ನಗರದ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಎಸ್.ಎ. ರಾಮದಾಸ್ ಹಮ್ಮಿಕೊಂಡ ಜನಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರವನ್ನು ‘40 ಪರ್ಸೆಂಟ್ ಸರ್ಕಾರ’ ಎಂದು ಕಾಂಗ್ರೆಸ್ ಟೀಕಿಸುತ್ತಿದೆ. ಆದರೆ, ಕಾಂಗ್ರೆಸ್ ಕಲ್ಲಿದ್ದಲ್ಲು, 2ಜಿ ತರಂಗಾಂತರ ಸೇರಿದಂತೆ ಪಂಚಭೂತಗಳಲ್ಲೂ ಭ್ರಷ್ಟಾಚಾರ ನಡೆಸಿತು. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅರ್ಕಾವತಿ ಡಿ ನೋಟಿಫಿಕೇಷನ್‌ನಲ್ಲಿ ನಡೆಸಿರುವ ಹಗರಣ ಸದ್ಯದಲ್ಲಿಯೇ ಬಯಲಿಗೆ ಬರಲಿದ್ದು, ಆ ಸಂದರ್ಭ ಅವರು ಎಲ್ಲಿ ಇರುತ್ತಾರೆ ನೋಡಿ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ನಿರಂತರ ಬೈಯ್ಯುತ್ತಲೇ ಅವರೊಂದಿಗೆ ಸಿದ್ದರಾಮಯ್ಯ ಅನೈತಿಕ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದರು. ಆದರೆ, ಕುಮಾರಸ್ವಾಮಿ ವಿಧಾನಸೌಧದಲ್ಲಿ ಕುಳಿತು ಅಧಿಕಾರ ನಡೆಸಲಿಲ್ಲ. ಬದಲಿಗೆ ತಾಜ್ ವೆಸ್ಟ್‌ಎಂಡ್‌ನಲ್ಲಿ ಕುಳಿತು ಆಡಳಿತ ನಡೆಸಿದರು. ಈ ರೀತಿ ಆಡಳಿತ ನೀಡಿರುವ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರಿಂದ ಜನ ಕಲ್ಯಾಣ ನಿರೀಕ್ಷಿಸಲು ಸಾಧ್ಯವಿಲ್ಲ. ಆ ಕಾರಣಕ್ಕೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಇದ್ದ ಶಾಸಕರು, ಸಚಿವರು ರಾಜೀನಾಮೆ ನೀಡಿ ಬಿಜೆಪಿಗೆ ಆಗಮಿಸಿದರು. ಇದೀಗ ಅದ್ಭುತ ಆಡಳಿತವನ್ನು ಬಿಜೆಪಿ ಸರ್ಕಾರ ನೀಡುತ್ತಿದೆ. ನೆರೆಯಿಂದ ಮನೆ ಕಳೆದುಕೊಂಡವರಿಗೆ 5 ಲಕ್ಷ ಪರಿಹಾರವನ್ನು ಪ್ರಥಮ ಬಾರಿಗೆ ನೀಡಿದ್ದು ಬಿಜೆಪಿ ಸರ್ಕಾರ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ 17 ಉಪ ಚುನಾವಣೆಗಳಲ್ಲಿ 15 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿಸಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷವನ್ನು ಮತದಾರರು ತಿರಸ್ಕರಿಸಿದ್ದಾರೆ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲಿಯೇ ಹೆಸರುವಾಸಿಯಾಗಿದ್ದಾರೆ. ದೆಹಲಿಯ ಮೂರು ಅಂಗಡಿಗೆ ಭೇಟಿ ನೀಡಿ ಯಡಿಯೂರಪ್ಪ ಅವರ ಫೋಟೋ ನೀಡುವಂತೆ ಕೇಳಿದೆ. ಆದರೆ ಎರಡು ಅಂಗಡಿಗಳಲ್ಲಿ ಯಡಿಯೂರಪ್ಪ ಅವರ ಫೋಟೋ ದೊರೆಯಲಿಲ್ಲ. ಆದರೆ, ಎಲ್ಲ ಅಂಗಡಿಗಳಲ್ಲೂ ಸಿದ್ದರಾಮಯ್ಯ ಫೋಟೊ ಇತ್ತು. ಇದನ್ನು ನೋಡಿ ನನಗೆ ತುಂಬಾ ಆಶ್ಚರ್ಯ ಆಯಿತು. ಈ ಬಗ್ಗೆ ಪ್ರಶ್ನೆ ಮಾಡಿದಾಗ ‘ಯಡಿಯೂರಪ್ಪ ಅವರ ಭಾವಚಿತ್ರ 5 ನಿಮಿಷದಲ್ಲಿ ಖಾಲಿ ಆಗುತ್ತದೆ, ಆದರೆ 10 ವರ್ಷಗಳಾದರೂ ಸಿದ್ದರಾಮಯ್ಯ ಭಾವಚಿತ್ರ ಖಾಲಿ ಆಗುತ್ತಿಲ್ಲ’ ಎಂಬ ಮಾಹಿತಿ ದೊರೆಯಿತು. ಸಿದ್ದರಾಮಯ್ಯ ಜನರಿಂದ ತಿರಸ್ಕಾರಕ್ಕೆ ಒಳಗಾಗಿದ್ದಾರೆ ಎಂದು ಟೀಕಿಸಿದರು.
ನರಹಂತಕ ಸಿದ್ದರಾಮಯ್ಯ ಅವರ ಆಡಳಿತದಲ್ಲಿ 24 ಹಿಂದೂ ಕಾರ್ಯಕರ್ತರ ಹತ್ಯೆ ನಡೆಯಿತು. ಅವರ ಮನೆಗಳಿಗೆ ಭೇಟಿ ನೀಡಿ ಕುಟುಂಬದವರ ಕಣ್ಣೀರು ಒರೆಸುವ ಕಾರ್ಯವನ್ನು ಸಿದ್ದರಾಮಯ್ಯ ಮಾಡಲಿಲ್ಲ. ಬದಲಿಗೆ ಕೋಮು ಗಲಬೆ, ಹತ್ಯೆಗೆ ಕಾರಣಕರ್ತರಾದ 2 ಸಾವಿರ ಪಿಎಫ್‌ಐ ಕಾರ್ಯಕರ್ತರನ್ನು ಬಿಡುಗಡೆ ಮಾಡಿದರು. ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಹತ್ಯೆಗೂ ಇದೇ ಪಿಎಫ್‌ಐ ಕಾರ್ಯಕರ್ತರು ಯತ್ನಿಸಿದರು. ಆದರೆ, ಆ ಸಂದರ್ಭ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸುವ ಆಸಕ್ತಿಯನ್ನು ಸಿದ್ದರಾಮಯ್ಯ ತೋರಲಿಲ್ಲ. ಆದರೆ, ಇದೀಗ ಪ್ರಧಾನಿ ನರೇಂದ್ರ ಮೋದಿ ಪಿಎಫ್‌ಐಯನ್ನು ನಿಷೇಧಿಸುವ ದಿಟ್ಟ ನಿರ್ಧಾರ ಕೈಗೊಂಡರು ಎಂದು ಹೇಳಿದರು.
ಭಾರತ್ ಜೋಡೋ ಯಾತ್ರೆಯಲ್ಲಿ ಎಸ್‌ಡಿಪಿಐ ಕಾರ್ಯಕರ್ತರು ಪಾಲ್ಗೊಂಡಿದ್ದರು. ಅಧಿಕಾರಕೋಸ್ಕರ ಸಿದ್ದರಾಮಯ್ಯ ಎಸ್‌ಡಿ ಪಿಐನೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ಪ್ರೀತಿಯಿಂದ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳಲಿಲ್ಲ. ಸೋಲಿನ ಭೀತಿಯಿಂದ ಅವರು ಕ್ಷೇತ್ರ ಹುಡುಕಾಟದ ಸಲುವಾಗಿ ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಹುಲಿಯ ಮುಂದಿನ ಚುನಾವಣೆಯಲ್ಲಿ ಇರುವುದಿಲ್ಲ, ಅವರು ಸೋಲುವ ಮೂಲಕ ಕಾಡಿಗೆ ಹೋಗುವುದು ನಿಶ್ಚಿತ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಸೋಲಿಗೆ ಸಿದ್ದರಾಮಯ್ಯ ಕಾರಣ. ಹಾಗಾಗಿ ಈ ಬಾರಿ ಸಿದ್ದರಾಮಯ್ಯ ಅವರಿಗೆ ಸೋಲಿನ ಭೀತಿ ಎದುರಾಗಿದೆ ಎಂದರು.
ಮೈಸೂರು ಮಹಾರಾಜರು ನಾಡಿನ ಅಭಿವೃದ್ಧಿಗೆ ಅಪಾರವಾದ ಕೊಡುಗೆ ನೀಡಿದರು. ಒಡೆಯರ್ ಆಡಳಿತ ದೇಶಕ್ಕೆ ಮಾದರಿಯಾಗಿದೆ. ಅಂತಹ ಒಡೆಯರ್‌ಗಳನ್ನು ಸಿದ್ದರಾಮಯ್ಯ ಏಕವಚನದಲ್ಲಿ ಟೀಕಿಸಿದ ಖಳನಾಯಕ ಸಿದ್ದರಾಮಯ್ಯ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಅವರಿಂದ ಹಿಂದೂಗಳಿಗೆ ನಿರಂತರ ಅನ್ಯಾಯವಾಗಿದೆ. ಅವರು ಯಾವುದೇ ಸಮುದಾಯಗಳಿಗೆ ನ್ಯಾಯ ಒದಗಿ ಸಲಿಲ್ಲ. ಅವರದ್ದೇ ಸಮುದಾಯವಾದ ಕುರುಬ ಸಮುದಾಯಕ್ಕೂ ಅವರು ನ್ಯಾಯ ನೀಡಲಿಲ್ಲ ಎಂದು ಟೀಕಿಸಿದರು.
ಜೆಡಿಎಸ್ ಹಾಗೂ ಕಾಂಗ್ರೆಸ್ ಯಾತ್ರೆಗಳನ್ನು ಪ್ರಾರಂಭಿಸಿದೆ. ಜೆಡಿಎಸ್ ‘ಪಂಚತಂತ್ರ’ ಪ್ರಣಾಳಿಕೆ ಮೂಲಕ ಚುನಾವಣಾ ಪ್ರಚಾರ ಪ್ರಾರಂಭಿಸಿದೆ. ಪಂಚಮಂತ್ರ ಬಿಜೆಪಿಯ ಕಾರ್ಯಕ್ರಮವಾಗಿದ್ದು, ಅದನ್ನು ಜೆಡಿಎಸ್ ಕಾಪಿ ಹೊಡೆದಿದೆ. ನೀವು ಕಾಪಿ ಹೊಡೆದರೂ ಸಹ ಅಧಿಕಾರಕ್ಕೆ ಬರುವುದಿಲ್ಲ ಎಂದು ಭವಿಷ್ಯ ನುಡಿದರು.
ವೇದಿಕೆಯಲ್ಲಿ ಶಾಸಕ ಎಸ್.ಎ. ರಾಮದಾಸ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ, ವಿಭಾಗೀಯ ಪ್ರಭಾರಿ ಮೈ.ವಿ. ರವಿಶಂಕರ್, ವಿಧಾನ ಪರಿಷತ್ ಸದಸ್ಯ ತುಳಸಿ ಮುನಿರಾಜುಗೌಡ, ಮಾಜಿ ಸದಸ್ಯ ತೋಂಟದಾರ್ಯ, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಮೇಯರ್ ಶಿವಕುಮಾರ್, ಉಪ ಮೇಯರ್ ರೂಪಾ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಮಾಜಿ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ ಹಾಗೂ ಇತರರು ಇದ್ದರು.