

ಮೈಸೂರು: ಸಿದ್ದರಾಮಯ್ಯ ಅವರೇ ಐದು ವರ್ಷವೂ ಮುಖ್ಯಮಂತ್ರಿ ಆಗಿ ಇರಲಿದ್ದು, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಪ್ರತಿಕ್ರಿಯಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ. ವಿಜಯೇಂದ್ರ ಏನು ಬೇಕಾದರೂ ಹೇಳಲಿ. ಅವರು ಏನು ನಮ್ಮ ಪಕ್ಷದವರಾ? ನಮ್ಮ ಪಕ್ಷದ ತೀರ್ಮಾನ ಅವರಿಗೇನು ಗೊತ್ತು ಎಂದು ಪ್ರಶ್ನಿಸಿದರು.
ನಾನು ಮುಖ್ಯಮಂತ್ರಿ ಆಗುವ ಆಸೆ ಈಗಿಲ್ಲ. ನನ್ನ ಯಾಕೆ ನೀವು ಕೀಟಲೆ ಮಾಡುತ್ತೀರಾ? ಸಿದ್ದರಾಮಯ್ಯ 5 ವರ್ಷ ಸಿಎಂ ಅಂತ ಹೇಳಿದ್ದೇನೆ. ಹಾಗಾಗಿ ನಾನು ಸಿಎಂ ಆಗುವ ಪ್ರಶ್ನೆ ಎಲ್ಲಿ ಬರುತ್ತದೆ ಎಂದು ಪ್ರತಿಕ್ರಿಯಿಸಿದರು.
ರಾಜಕೀಯದಲ್ಲಿ ಯಾವಾಗ, ಏನಾಗುತ್ತೋ ಎಂಬ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟನೆ ನೀಡಿದ ಅವರು, ನಾನು ಆ ರೀತಿ ಎಲ್ಲಿಯೂ ಹೇಳಿಲ್ಲ. ರಾಜ್ಯದಲ್ಲಿ ಸರ್ಕಾರ ಸುಭದ್ರವಾಗಿದೆ. ಸಿಎಂ ಸಿದ್ದರಾಮಯ್ಯ ಸುಭದ್ರ ಆಡಳಿತ ನೀಡುತ್ತಿದ್ದಾರೆ. ರಾಜ್ಯ ಕಾಂಗ್ರೆಸ್‌ನಲ್ಲಿ ಅವಧಿ ಮುಗಿದ ಬಳಿಕ ಅಧ್ಯಕ್ಷರ ಬದಲಾವಣೆ ಅಗುತ್ತದೆ. ಅಧ್ಯಕ್ಷರು, ಜಿಲ್ಲೆಯವರೇ ಆದ ಸಿದ್ದರಾಮಯ್ಯ ಅವರ ಅವಧಿ ಮುಗಿದರೆ ಮೈಸೂರಿನಲ್ಲಿ ಕಾಂಗ್ರೆಸ್ ಕಟ್ಟಡ ನಿರ್ಮಾಣ ಮತ್ತಷ್ಟು ನಿಧಾನ ಅಗಬಹುದು ಎನ್ನುವ ವಿಚಾರದಲ್ಲಿ ನಾನು ಮಾತನಾಡಿರುವುದು ಅಷ್ಟೆ. ನಾನು ಪಕ್ಷದ ವಿಚಾರವಾಗಿ ಬೇಗ ಕಟ್ಟಡ ಕಟ್ಟಿ ಅಂತ ಹೇಳಿದ್ದೇನೆಯೇ ಹೊರತು ಸಿದ್ದರಾಮಯ್ಯ ಬದಲಾಗುತ್ತಾರೆ ಎಂದು ಎಲ್ಲಿಯೂ ಹೇಳಿಲ್ಲ ಎಂದು ಸಮರ್ಥಿಸಿಕೊಂಡರು.
ಸಚಿವ ಜಮೀರ್ ವಿರುದ್ಧ ಶಿಸ್ತು ಕ್ರಮ ಕುರಿತು ಪಕ್ಷದ ಅಧ್ಯಕ್ಷರು ನಿರ್ಧಾರ ತೆಗೆದುಕೊಳ್ಳಲಿದ್ದು, ಆ ಅಧಿಕಾರ ಅವರಿಗೆ ಇದೆ. ಪಕ್ಷದಲ್ಲಿ ಶಿಸ್ತು ಸಮಿತಿ ಇದ್ದು, ಆ ಸಮಿತಿಗೆ ವರದಿ ಹೋದರೆ ವಿಚಾರಣೆ ನಡೆಸಲಿದ್ದಾರೆ ಎಂದರು.
ರಾಜ್ಯದಲ್ಲಿ ಸಚಿವ ಸಂಪುಟ ಮರುರಚನೆ ವಿಚಾರವನ್ನು ಹೈಕಮಾಂಡ್ ತೀರ್ಮಾನ ಮಾಡಲಿದೆ. ಸದ್ಯಕ್ಕೆ ಎಲ್ಲ ಸಚಿವರ ರಿಪೋರ್ಟ್ ಕಾರ್ಡ್ ಕೇಳಲಾಗಿದೆ. ನಾನೂ ನನ್ನ ರಿಪೋರ್ಟ್ ಕಾರ್ಡ್ ನೀಡಿರುವೆ. ಯಾರನ್ನು ಉಳಿಸಿಕೊಳ್ಳಬೇಕು? ಮುಂದುವರಿಸಬೇಕು? ಎನ್ನುವುದನ್ನು ಹೈಕಮಾಂಡ್ ತೀರ್ಮಾನಿಸಲಿದೆ. ಈ ಹಿಂದೆ ಗುಲಾಂ ನಬಿ ಆಜಾದ್ ಉಸ್ತುವಾರಿ ಇದ್ದಾಗ ಕೂಡ ವರದಿ ನೀಡುತ್ತಿದ್ದೆವು. ಅದೇ ರೀತಿ ವರದಿ ಕೇಳಿದ್ದಾರಷ್ಟೇ ಎಂದರು.