ಶ್ರೀ ಚಾಮುಂಡೇಶ್ವರಿ ದರ್ಶನ ಪಡೆದ ಸಿದ್ದರಾಮಯ್ಯ

siddaramaiah1
Published on

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ನಾಡಿನ ಅಧಿದೇವತೆ ತಾಯಿ ಶ್ರೀ ಚಾಮುಂಡೇಶ್ವರಿಯ ದರ್ಶನ ಪಡೆದರು.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಆರೋಪಗಳಿಗೆ ನಗರದಲ್ಲಿ ಬೃಹತ್ ಜನಾಂದೋಲನ ಸಮಾವೇಶ ನಡೆಸುವ ಮೂಲಕ ತಕ್ಕ ಉತ್ತರ ನೀಡಿದ ಸಿದ್ದರಾಮಯ್ಯ ಶನಿವಾರ ಲವಲವಿಕೆಯಿಂದ ಕಂಡು ಬಂದರು. ಮಾಧ್ಯಮದವರ ಪ್ರಶ್ನೆಗಳಿಗೆ ನಗುತ್ತಲೇ ಉತ್ತರ ನೀಡಿದರು. ಇದಾದ ಬಳಿಕ ಚಾಮುಂಡಿಬೆಟ್ಟಕ್ಕೆ ತೆರಳಿ ಶ್ರೀ ಚಾಮುಂಡೇಶ್ವರಿ ದರ್ಶನ ಪಡೆದು ನಗು ಮೊಗದಿಂದಲೇ ದೇವಸ್ಥಾನದಿಂದ ಹೊರ ಬಂದರು.

ದೇವಸ್ಥಾನದಲ್ಲಿ ಆರತಿ ಸ್ವೀಕರಿಸಿದ ನಂತರ ತಮ್ಮ ಪರ್ಸ್‌ನಿಂದ 500 ರೂ. ತೆಗೆದು ಕಾಣಿಕೆ ತಟ್ಟೆಗೆ ಹಾಕಿದರು. ದೇವಸ್ಥಾನಕ್ಕೆ ಮುಖ್ಯಮಂತ್ರಿ ಆಗಮಿಸಿದ ಸಂದರ್ಭ ಶಲ್ಯ ಹೊದಿಸಿ ಹಾರ ಹಾಕಿ ಸ್ವಾಗತಿಸಲಾಯಿತು. ಈ ಸಂದರ್ಭ ಸಿದ್ದರಾಮಯ್ಯ ಅವರಿಗೆ ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ಹಣೆಗೆ ಕುಂಕುಮ ಹಚ್ಚಿದರು. ನಂತರ ಸಿದ್ದರಾಮಯ್ಯ ತೀರ್ಥ ಪ್ರಸಾದ, ಮಂಗಳಾರತಿ ಸ್ವೀಕರಿಸಿ ದೇವರಿಗೆ ನಮಸ್ಕರಿಸಿ ಉತ್ಸಾಹದಿಂದ ನಿರ್ಗಮಿಸಿದರು. ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ಮುಡಾ ಅಧ್ಯಕ್ಷ ಕೆ. ಮರಿಗೌಡ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಹಾಗೂ ಇತರರು ಸಿದ್ದರಾಮಯ್ಯಗೆ ಸಾಥ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net