ಸಿದ್ದರಾಮಯ್ಯ ಅವರನ್ನು ಬದಲಿಸಿದ ರಾಮ ಭಕ್ತರು-ಕೋಟ ಪೂಜಾರಿ

ATTACHMENT DETAILS Bjp-President-Padagranahana
Published on

ಕುಮಟಾ: ಕಾಂತರಾಜ್ ವರದಿ ಅಂಗೀಕರಿಸಿ ಸರ್ಕಾರ ಹಿಂದುಳಿದವರು, ದಲಿತರ ಪರ ಎಂದು ಬಿಂಬಿಸಲು ಹೊರಟಿರುವ ಸಿಎಂ ಸಿದ್ದರಾಮಯ್ಯ ಅವರು ಹಿಂದುಳಿದವರಿಗೆ ಉನ್ನತ ಶಿಕ್ಷಣ ಪಡೆಯಲು ವಿದ್ಯಾರ್ಥಿವೇತನ ಕೊಡಲು ಮರೆತಿದ್ದಾರೆ ಎಂದು ವಿಧಾನ ಪರಿಷತ್ ಪ್ರತಿ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದರು.
ಕುಮಟಾದ ಹವ್ಯಕ ಸಭಾಭವನದಲ್ಲಿ ಬಿಜೆಪಿ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಅತಿಥಿಯಾಗಿ ಮಾತನಾಡಿದರು. ರಾಮ ಒಬ್ಬ ಕಾಲ್ಪನಿಕ ವ್ಯಕ್ತಿ ಎಂದು ಈ ಹಿಂದೆ ಕಾಂಗ್ರೆಸ್ ಪಕ್ಷ ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿತ್ತು. ಆದರೆ, ಪರಿಸ್ಥಿತಿ ಬದಲಾಗಿದ್ದಾರೆ. ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರೂ `ಜೈ ಶ್ರೀರಾಮ' ಎನ್ನುವಷ್ಟರ ಮಟ್ಟಿಗೆ ರಾಮ ಭಕ್ತರನ್ನು ಕಾಂಗ್ರೆಸ್ಸನ್ನು ಕಂಗಾಲಾಗಿಸಿದ್ದಾರೆ. ಮುಂಬರುವ ಚುನಾವಣೆ ನಡೆಯುತ್ತಿರುವುದು ರಾಮ ಭಕ್ತರು ಹಾಗೂ ಟಿಪ್ಪು ಭಕ್ತರ ನಡುವೆ ಎಂದರು.
ಪಕ್ಷದ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಕಾಂಗ್ರೆಸ್‌ನ ಗ್ಯಾರಂಟಿ ನಂಬಿ ಜನ ಮೋಸ ಹೋಗಿದ್ದಾರೆ. ಸುಳ್ಳು, ದಿವಾಳಿತನದ ಸರ್ಕಾರದ ವಾಸ್ತವತೆಯ ಬಗ್ಗೆ ಜನರಿಗೆ ತಿಳಿಸಬೇಕಿದೆ ಎಂದರು. ಶಾಸಕ ದಿನಕರ ಶೆಟ್ಟಿ ಮಾತನಾಡಿ, ಪಕ್ಷದ ನಿಕಟಪೂರ್ವ ಅದ್ಯಕ್ಷ ವೆಂಕಟೇಶ ನಾಯಕ, ಹಾಗೂ ಹಾಲಿ ಅಧ್ಯಕ್ಷ ಎನ್.ಎಸ್.ಹೆಗಡೆ ಈ ಹಿಂದೆ ಜೋಡೆತ್ತಿನಂತೆ ದುಡಿದು ಪಕ್ಷ ಸಂಘಟನೆ ಬಲಗೊಳಿಸಿದ್ದಾರೆ ಎಂದರು.
ನಿಕಟಪೂರ್ವ ಅಧ್ಯಕ್ಷ ವೆಂಕಟೇಶ ನಾಯ್ಕ ನೂತನ ಅಧ್ಯಕ್ಷ ಎನ್.ಎಸ್.ಹೆಗಡೆ ಅವರಿಗೆ ಪಕ್ಷದ ಧ್ವಜ ಹಸ್ತಾಂತರಿಸಿದರು. ಪಕ್ಷದ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ಎಂಎಲ್‌ಸಿ ಶಾಂತಾರಾಮ ಸಿದ್ದಿ, ಮಾಜಿ ಶಾಸಕರಾದ ಸುನೀಲ ಹೆಗಡೆ, ಸುನೀಲ ನಾಯ್ಕ, ವಿವೇಕಾನಂದ ವೈದ್ಯ, ಪಕ್ಷದ ಪ್ರಮುಖರಾದ ಶಶಿಭೂಷಣ ಹೆಗಡೆ, ಮಾಜಿ ಜಿಲ್ಲಾಧ್ಯಕ್ಷರಾದ ಕೆ.ಜಿ.ನಾಯ್ಕ, ಎಂ.ಜಿ.ನಾಯ್ಕ, ಗೋವಿಂದ ನಾಯ್ಕ, ಚಂದ್ರು ಎಸಳೆ, ಪ್ರಭಾರಿ ಗಜಾನನ ಗುನಗಾ ಇತರರು ಇದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net