

ಬೆಂಗಳೂರು: ಅಧಿಕಾರದಲ್ಲಿದ್ದಾಗ ಈಯಜಮಾನರು ಜಾತಿವಾರು ಸಮೀಕ್ಷೆ ನಡೆಸಿದ್ದರು. ಸಮಾಜವನ್ನು ಜಾತಿ, ಧರ್ಮ, ಕುಲ ಆಧಾರಿತವಾಗಿ ಒಡೆಯಲು ಹೊರಟಿದ್ದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ಎನ್ಆರ್ಸಿ, ಸಿಎಎ, ಎನ್ಪಿಆರ್ ಪ್ರಸ್ತಾವನೆಗಳು ಯಾರ ಕಾಲದಲ್ಲಾಗಿದ್ದು? ದೇಶದಲ್ಲಿ ಆಧಾರ್ ಬಂದದ್ದು ಹೇಗೆ ಎಂಬುದನ್ನು ಮೊದಲು ಅವರು ತಿಳಿದುಕೊಳ್ಳಲಿ ಎಂದು ಕುಟುಕಿದರು.
ಜನ್ಮದಿನಾಂಕ ಇಲ್ಲವೆಂದು ದೇಶದಿಂದ ಹೊರಗೆ ಹಾಕುತ್ತೇವೆ ಎಂದು ಯಾರಾದಾರೂ ಹೇಳಿದ್ದಾರೆಯೆ? ಪ್ರತಿಪಕ್ಷದಲ್ಲಿದ್ದೇವೆ ಎಂದು ಇಲ್ಲಸಲ್ಲದ ಆರೋಪ ಮಾಡಿ ಜನರ ದಾರಿ ತಪ್ಪಿಸುವುದು, ಧರ್ವಧಾರಿತವಾಗಿ ದೇಶವನ್ನು ವಿಭಜನೆ ಮಾಡೋದು ಸರಿಯಲ್ಲ. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರು ಇಂತಹ ಕೆಲಸಗಳನ್ನು ನಿಲ್ಲಿಸಲಿ ಎಂದು ಒತ್ತಾಯಿಸಿದರು.
ಸಿದ್ಧತೆ ಬೇಕಿಲ್ಲ: ಮುಂಬರುವ ವಿಧಾನ ಮಂಡಲದ ಅಧಿವೇಶನಲ್ಲಿ ಪ್ರತಿಪಕ್ಷಗಳನ್ನು ಎದುರಿಸಲು ಸಿದ್ಧತೆಯೇ ಬೇಕಿಲ್ಲ. ಅವರು ಮಾಡಿರುವ ಕೆಲಸಗಳಿಗೆ ಕನ್ನಡಿ ಹಿಡಿಯುತ್ತೇವೆ. ಅಧಿವೇಶನದಲ್ಲಿ ಸಂವಿಧಾನದ ಬಗ್ಗೆ 2 ದಿನ ಚರ್ಚೆಗೆ ಅವಕಾಶ ಕಲ್ಪಿಸಿರುವುದು ಒಳ್ಳೆಯ ಬೆಳವಣಿಗೆ ಎಂದು ಸ್ಪೀಕರ್ ನಿರ್ಧಾರವನ್ನು ಡಿಸಿಎಂ ಸ್ವಾಗತಿಸಿದರು.
ಸರ್ಕಾರದ ಹಸ್ತಕ್ಷೇಪವಿಲ್ಲ: ಬೀದರ್ನ ಶಾಹೀನ್ ಶಾಲೆ ಪ್ರಕರಣದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿಲ್ಲ. ಆ ಶಾಲೆಯಲ್ಲಿ ಪ್ರಧಾನಿಗೆ ಅವಹೇಳನ ಮಾಡಲಾಯಿತು ಎಂದು ವ್ಯಕ್ತಿಯೊಬ್ಬರು ದೂರು ಕೊಟ್ಟ ಹಿನ್ನೆಲೆಯಲ್ಲಿ ಕಾನೂನು ಕ್ರಮವಾಗಿದ್ದು, ಇದರಲ್ಲಿ ಪೊಲೀಸರ ದುರ್ಬಳಕೆ ಪ್ರಶ್ನೆಯೇ ಉದ್ಭವಿಸದು. ದುರ್ಬಳಕೆ ಕಾಂಗ್ರೆಸ್ ಮನಸ್ಥಿತಿ ಎಂದು ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದರು.