

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಕಾಗೆ ಬೆಳ್ಳಗಿದೆ ಎಂದು ಹೇಳಿದರೆ ಬಿಜೆಪಿ ನಾಯಕರು ಕಾಗೆ ಬೆಳ್ಳಗಿದೆ ಅನ್ನುತ್ತಾರೆ. ಅವರು ನಾಯಿಗೆ ಬಾಲ ಇಲ್ಲ ಎಂದರೆ ಇವರೂ ಇಲ್ಲ ಎಂದು ಹೇಳುತ್ತಾರೆ. ಬಿಜೆಪಿ ಸುಳ್ಳುಗಳನ್ನೇ ಹೇಳುತ್ತಾ ಅಧಿಕಾರ ನಡೆಸುತ್ತಿದ್ದು, ಇದನ್ನು ಜನತೆಗೆ ತಿಳಿಸುವ ಕಾರ್ಯ ಆಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ವಿದ್ಯಾರಣ್ಯಪುರಂನ ಭೂತಾಳೆ ಮೈದಾನದಲ್ಲಿ ಬುಧವಾರ ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಬೆಂಬಲಿಗರ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಳೆದ ಬಾರಿ ಕಾಂಗ್ರೆಸ್ ಸರ್ಕಾರ 165 ಭರವಸೆಗಳನ್ನು ನೀಡಿ 158 ಭರವಸೆಗಳನ್ನು ಈಡೇರಿಸಿದೆವು. ಈ ಬಾರಿ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದಂತೆ 5 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದ್ದೇವೆ. ನಾವು ‘ನುಡಿದಂತೆ ನಾವು ನಡೆದಿದ್ದೇವೆ’ ಎಂದು ಹೆಮ್ಮೆಯಿಂದ ಹೇಳುತ್ತೇವೆ. 36 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳನ್ನು ಖರ್ಚು ಮಾಡಿದ್ದೇವೆ, ಒಂದು ಪೈಸೆಯನ್ನು ಕೇಂದ್ರದಿಂದ ಕೇಳಿಲ್ಲ. ಪ್ರಸಕ್ತ ವರ್ಷ ಗ್ಯಾರಂಟಿ ಯೋಜನೆಗೆ 52 ಸಾವಿರ ಕೋಟಿ ತೆಗೆದಿಟ್ಟಿದ್ದೇವೆ ಎಂದು ಹೇಳಿದರು.