ದೇಶದ್ರೋಹ ಪ್ರಕರಣದಲ್ಲಿದ್ದವರಿಗೆ ಸಿದ್ದು ಬಲ

Siddaramia 21 Dec 19
Published on

ಬೆಂಗಳೂರು: ದೇಶದ್ರೋಹ ಪ್ರಕರಣ ಎದುರಿಸುತ್ತಿರುವ ಬೀದರ್​ನ ಶಾಹೀನ್ ಶಿಕ್ಷಣ ಸಂಸ್ಥೆಗೆ ಬೆಂಬಲ ಘೊಷಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಾಂಗ್ರೆಸ್ ನೀತಿ, ತತ್ವ, ಸಿದ್ಧಾಂತ ಹಾಗೂ ಸಂಸ್ಕೃತಿ ಎಂಥದ್ದು ಎಂಬುದನ್ನು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿರುಗೇಟು ನೀಡಿದ್ದಾರೆ.

ಶಾಹೀನ್ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಂದ ನಡೆದಿರುವ ನಾಟಕದಲ್ಲಿ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ಅವಾಚ್ಯ ಪದ ಬಳಸಲಾಗಿದೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರಗೊಂಡ ಪೌರತ್ವ ತಿದ್ದುಪಡಿ ಕಾಯ್ದೆಧಿಕ್ಕರಿಸಿ ಪ್ರದರ್ಶನ ನೀಡಿ ಸಮಾಜಕ್ಕೆ ತಪ್ಪು ಸಂದೇಶ ರವಾನಿಸಲಾಗಿದೆ ಎಂದು ಸಮರ್ಥನೆ ಮಾಡಿದ್ದಾರೆ.

ವಸ್ತುಸ್ಥಿತಿ ಹೀಗಿರುವಾಗ ಸಿದ್ದರಾಮಯ್ಯ ಅವರು ಯಾರದೋ ತುಷ್ಠಿಕರಣಕ್ಕಾಗಿ ಶಾಹೀನ್ ಸಂಸ್ಥೆ ಬೆನ್ನಿಗೆ ನಿಂತಿರುವುದು ನಾಚಿಕೆಗೇಡಿನ ಸಂಗತಿ. ದೇಶದ್ರೋಹದಂತಹ ಗಂಭೀರ ಪ್ರಕರಣವನ್ನೂ ಇವರು ರಾಜಕೀಯ ಸ್ವಾರ್ಥಕ್ಕೆ ಬಳಸಿಕೊಳ್ಳಲು ಹೊರಟಿರುವುದು ಖಂಡನೀಯ ಎಂದಿದ್ದಾರೆ.

ಸಿದ್ದರಾಮಯ್ಯ ಹಿರಿಯ ರಾಜಕಾರಣಿ. ರಾಜ್ಯದ ಮುಖ್ಯಮಂತ್ರಿ ಆಗಿದ್ದವರು. ಮೇಲಾಗಿ ವಕೀಲರು. ದೇಶದ ಸಂವಿಧಾನ, ಕಾನೂನು, ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರವಾದ ಕಾಯ್ದೆಗಳ ಮಹತ್ವವನ್ನು ಗೊತ್ತಿರಬೇಕು. ಇದಕ್ಕೂ ಮೇಲಾಗಿ ನ್ಯಾಯಾಲಯದಲ್ಲಿ ಪ್ರಕರಣ ಇರುವಾಗ ಏನು ಹೇಳಬೇಕು ಎಂಬುದು ಅರಿತಿರಬೇಕು. ನ್ಯಾಯಾಲಯ ಮೇಲೆ ಗೌರವ, ವಿಶ್ವಾಸ, ನಂಬಿಕೆ ಇಡಬೇಕು. ಇದನ್ನೆಲ್ಲ ಬಿಟ್ಟು ಶಾಹೀನ್ ಸಂಸ್ಥೆಗೆ ಓಡೋಡಿ ಬಂದು, ಪ್ರಕರಣದಲ್ಲಿ ಬಂಧಿತರಿಗೆ ಭೇಟಿಯಾಗಿ ನಿಮ್ಮ ಜೊತೆಗೆ ನಾವಿದ್ದೇವೆ ಎಂದು ಹೇಳಿರುವುದು ಹಾಸ್ಯಾಸ್ಪದ. ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರನ್ನು ಮೆಚ್ಚಿಸಲು ಯಾವುದೇ ಕೆಲಸ ಮಾಡಲು ಹೇಸುವುದಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಸಚಿವ ಚವ್ಹಾಣ್ ತಿರುಗೇಟು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net